ಮುದ್ದೇಬಿಹಾಳ: ಕೋವಿಡ್-19 ಸಂಕಷ್ಟ ಸಮಯದಲ್ಲಿ ಹಳೆ ಕಾಯಿಪಲ್ಯೆ ಮಾರುಕಟ್ಟೆ ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಬಾರದು ಎಂದು ಆಗ್ರಹಿಸಿ ವ್ಯಾಪಾರಸ್ಥರು ಬುಧವಾರ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಗೋಪಾಲ ಕಾಸೆ, ಈಗಾಗಲೇ ಅಂಗಡಿಗಳು ಶಿಥಿಲಗೊಂಡಿದ್ದು ಅವುಗಳನ್ನು ತೆರವುಗೊಳಿಸಬೇಕಿದೆ. ಇಲ್ಲದಿದ್ದಲ್ಲಿ ಅಂಗಡಿಕಾರರ ಮೇಲೆ ಬಿದ್ದು ಅನಾಹುತವಾದರೆ ಅದಕ್ಕೆ ಪುರಸಭೆ ಹೊಣೆಯಾಗಬೇಕಾಗುತ್ತದೆ. ಇನ್ನೊಮ್ಮೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪಿಡಬ್ಲ್ಯೂಡಿ ಇಂಜಿನಿಯರ್‌ಗಳಿಂದ ತಪಾಸಣೆ ನಡೆಸಲಾಗುತ್ತದೆ ಎಂದು ಹೇಳಿದರು.
ಅಂಗಡಿಗಳನ್ನು ತೆರವುಗೊಳಿಸಬಾರದು ಎಂದು ಆಗ್ರಹಿಸಿ ವ್ಯಾಪಾರಸ್ಥರು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಪಟ್ಟಣದ ಪುರಸಭೆಗೆ ಆಗಮಿಸಿದ್ದ ವ್ಯಾಪಾರಸ್ಥರು, ಕಳೆದ ಮಾರ್ಚ್ನಿಂದ ಇಲ್ಲಿಯವರೆಗೆ ಕೊರೊನಾ ವೈರಸ್ ಹಾವಳಿಯಿಂದಾಗಿ ವ್ಯಾಪಾರಸ್ಥರು ನಷ್ಟ ಅನುಭವಿಸಿದ್ದೇವೆ. ಯಾವುದೇ ವ್ಯಾಪಾರ ಇಲ್ಲದೇ ಉಪ ಜೀವನ ನಡೆಸಲೂ ಕಷ್ಟದ ಪರಿಸ್ಥಿತಿ ಇದೆ. ಈ ಹಂತದಲ್ಲಿ ಅಂಗಡಿಗಳಿಂದ ನಮ್ಮನ್ನು ತೆರವುಗೊಳಿಸಿದರೆ ಬೀದಿಗೆ ಬಂದು ನಿಲ್ಲುತ್ತೇವೆ ಎಂದು ಹೇಳಿದರು.
ಇನ್ನು ಮಾರುಕಟ್ಟೆ ಶಿಥಿಲಗೊಂಡಿದೆ ಎಂಬ ಕಾರಣದಿಂದ ಅಂಗಡಿ ತೆರವಿಗೆ ಸೂಚಿಸಲಾಗುತ್ತಿದೆ. ಆದರೆ ಸಣ್ಣಪುಟ್ಟ ದುರಸ್ತಿ ಮಾಡಿಕೊಂಡು ಅಂಗಡಿಗಳಲ್ಲಿ ವ್ಯಾಪಾರ ಮುಂದುವರೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ, ಮಾಜಿ ಸದಸ್ಯ ಸಂತೋಷ ನಾಯ್ಕೋಡಿ, ವ್ಯಾಪಾರಸ್ಥರಾದ ಶರಣು ದೇಗಿನಾಳ, ಎಂ.ಹೆಚ್.ತುರಕನಗೋರಿ ಸೇರಿದಂತೆ ಮತ್ತಿತರರು ಇದ್ದರು.