ವಿಜಯಪುರ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲ ಮನೆಗಳು ಮತ್ತು ಸಾರ್ವಜನಿಕ ಕಟ್ಟಡಗಳಿಗೆ ನೀರಿನ ನಳಗಳ ಸಂಪರ್ಕ ಕಲ್ಪಿಸುವ ಜಲ ಜೀವನ ಯೋಜನೆಯಡಿ ಒಟ್ಟು 56,20,554 ಲಕ್ಷ ರೂ.ಗಳ ಕ್ರಿಯಾಯೋಜನೆ ಮಂಜೂರಾತಿಗಾಗಿ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅಧ್ಯಕ್ಷತೆಯಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಕುರಿತು ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಜಲ ಜೀವನ ಯೋಜನೆಯಡಿ 2020 ರಿಂದ 2024 ರವರೆಗೆ ಜಿಲ್ಲೆಯ ಎಲ್ಲ ಮನೆಗಳು, ಶಾಲೆ, ಅಂಗನವಾಡಿ ಕೇಂದ್ರ, ವಸತಿ ನಿಲಯ ಹಾಗೂ ಆರೋಗ್ಯ ಕೇಂದ್ರಗಳಿಗೆ ಕಾರ್ಯಾತ್ಮಕ ನಳನೀರು ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಈಗಾಗಲೇ ತಾಲೂಕುವಾರು ಮತ್ತು ಜಿಲ್ಲೆಯ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಈ ಕ್ರಿಯಾ ಯೋಜನೆಯಡಿ ಜಿಲ್ಲೆಯ ಐದು ತಾಲೂಕುಗಳ 3,53,658 ಮನೆಗಳಿಗೆ, 3.28 ಲಕ್ಷ ನಳಗಳ ಸಂಪರ್ಕಕ್ಕಾಗಿ 56,20,554 ಲಕ್ಷ ರೂ.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ರಾಜ್ಯ ಸರ್ಕಾರದ ಮಂಜೂರಾತಿಗೆ ಅರ್ಜಿ ಸಲ್ಲಿಸಲು ನಿರ್ಧರಿಸಲಾಯಿತು.