ಕರ್ನಾಟಕ

karnataka

ETV Bharat / state

ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಭೆ

ಕೋವಿಡ್ ರೋಗಿಗಳ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರ ಮೇಲೆ ಹೆಚ್ಚಿನ ನಿಗಾ ಇಡಬೇಕು. ಕ್ವಾರಂಟೈನ್ ವಾಟ್ಸ್​​ಆ್ಯಪ್, ಆರೋಗ್ಯ ಸೇತು ಆ್ಯಪ್​​ಗಳನ್ನು ಸರಿಯಾದ ರೀತಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳ ಗಂಟಲು ದ್ರವ ಮಾದರಿ ಪರೀಕ್ಷೆ ವ್ಯವಸ್ಥಿತ ರೀತಿ ಕೈಗೊಳ್ಳಬೇಕು..

Meeting on Covid Precautionary Measures
ಅಧಿಕಾರಿಗಳ ಜತೆ ಡಿಸಿ ಸಭೆ

By

Published : Aug 1, 2020, 10:17 PM IST

ವಿಜಯಪುರ :ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಕ್ರಮವಾಗಿ ಹೊಸದಾಗಿ ಪ್ರಾರಂಭಿಸಲಾಗಿರುವ ಆರ್‌ಟಿಪಿಸಿಆರ್ (ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ) ಲ್ಯಾಬ್‍ನಲ್ಲಿ ಗಂಟಲುದ್ರವ ಮಾದರಿ ಪರೀಕ್ಷೆಯನ್ನು ಮೂರು ಶಿಫ್ಟ್​​ ಮಾಡಬೇಕು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್‌ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್​​ ಕಾರ್ಯಾಲಯ ಸಭಾಂಗಣದಲ್ಲಿ ನಡೆದ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಾರಂಭವಾಗಿರುವ ಆರ್‌ಟಿಪಿಸಿಆರ್ ಲ್ಯಾಬ್‍ನಲ್ಲಿ ಎರಡು ಶಿಫ್ಟ್‌​​ಗಳಲ್ಲಿ ಗಂಟಲುದ್ರವ ಮಾದರಿಯನ್ನು ಪರೀಕ್ಷಿಸಲಾಗುತ್ತಿದ್ದು, ಮುಂದಿನ ಶುಕ್ರವಾರದಿಂದ ಮೂರು ಶಿಫ್ಟ್‌​​ಗಳಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಸಿಬ್ಬಂದಿ ಕೊರತೆ ಇದ್ದಲ್ಲಿ ಅವರನ್ನು ನೇಮಿಸಿ ತರಬೇತಿಯನ್ನು ನೀಡಬೇಕು.

ಒಂದು ಶಿಫ್ಟ್​​ನಲ್ಲಿ ಸುಮಾರು 91 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ 2 ಶಿಫ್ಟ್‌​ಗಳಲ್ಲಿ ಕಾರ್ಯಾರಂಭವಾಗಲಿದೆ. ಮುಂದಿನ ಶುಕ್ರವಾರದಿಂದ ಮೂರು ಶಿಫ್ಟ್​​ಗಳಲ್ಲಿ ಪರೀಕ್ಷೆಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಆರ್‌ಟಿಪಿಸಿಆರ್ ಲ್ಯಾಬ್‍ನಲ್ಲಿ ಸಿಬ್ಬಂದಿ ಹೆಚ್ಚಿಸಿಕೊಂಡು ಅವರಿಗೆ ಸೂಕ್ತ ತರಬೇತಿ ನೀಡಬೇಕು. ನೇಮಕಗೊಂಡವರಿಗೆ ತರಬೇತಿ ನೀಡಿದ ನಂತರ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ತಂಡಗಳ ಜೊತೆಯಲ್ಲಿ ಸೇರ್ಪಡೆಗೊಳಿಸಿ ಮೂರು ತಂಡಗಳನ್ನು ರಚಿಸಿಕೊಂದು ಕಾರ್ಯಾರಂಭ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಒಟ್ಟು 61 ಸ್ವ್ಯಾಬ್ ಕಲೆಕ್ಷನ್ ಸೆಂಟರ್​​ಗಳಿದ್ದು, ಎಲ್ಲಾ ಸೆಂಟರ್​​ಗಳಲ್ಲಿ ಗಂಟಲು ದ್ರವ ಮಾದರಿಯನ್ನು ಪಡೆದುಕೊಳ್ಳಲಾಗುತ್ತಿದೆ. ಗಂಟಲು ದ್ರವ ಮಾದರಿಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಅವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಒಟಿಪಿಯನ್ನು ಈಗಾಗಲೇ ಪಡೆದುಕೊಳ್ಳಲಾಗುತ್ತದೆ. ಇದರ ಜೊತೆಗೆ ಅವರ ಆಧಾರ್​​ ಕಾರ್ಡ್‍ನಲ್ಲಿರುವ ವಿಳಾಸವನ್ನು ಪಡೆಯಬೇಕು ಎಂದು ಸೂಚಿಸಿದರು.

ಗಂಟಲು ದ್ರವ ಮಾದರಿಯನ್ನು ಪಡೆದುಕೊಂಡ ನಂತರ ವ್ಯಕ್ತಿಗೆ ನೆಗೆಟಿವ್ ಬಂದಲ್ಲಿ ನಂತರದ ಕೆಲವು ದಿನಗಳ ಕಾಲ ನಿಗಾ ಇಡಬೇಕು. ಕ್ವಾರಂಟೈನ್ ವಾಟ್ಸ್​​ಆ್ಯಪ್ ಮೂಲಕ ಪ್ರತಿ ದಿನದ ಮಾಹಿತಿ ತಿಳಿಸಬೇಕು. ಜೊತೆಗೆ ಆರೋಗ್ಯದ ಬಗ್ಗೆ ಸ್ಥಳೀಯ ಆರೋಗ್ಯ ಅಧಿಕಾರಿಗಳು ಹಾಗೂ ಡಿಹೆಚ್‌ಒಗಳು ಮುನ್ನೆಚ್ಚರಿಕೆ ವಹಿಸಬೇಕು. ಹೋಮ್ ಕ್ವಾರಂಟೈನ್ ಸಂದರ್ಭದಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಯಲ್ಲಿ ಕೋವಿಡ್‍ಗೆ ಸಂಬಂಧಿಸಿದ ಲಕ್ಷಣಗಳು ಕಂಡು ಬಂದಲ್ಲಿ ಅವರ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಬೇಕು ಎಂದರು.

ಕೋವಿಡ್ ರೋಗಿಗಳ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರ ಮೇಲೆ ಹೆಚ್ಚಿನ ನಿಗಾ ಇಡಬೇಕು. ಕ್ವಾರಂಟೈನ್ ವಾಟ್ಸ್​​ಆ್ಯಪ್, ಆರೋಗ್ಯ ಸೇತು ಆ್ಯಪ್​​ಗಳನ್ನು ಸರಿಯಾದ ರೀತಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳ ಗಂಟಲು ದ್ರವ ಮಾದರಿ ಪರೀಕ್ಷೆ ವ್ಯವಸ್ಥಿತ ರೀತಿ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಒಟ್ಟು 15 ಆ್ಯಂಬುಲೆನ್ಸ್​​ ಕೋವಿಡ್‍ಗಾಗಿಯೇ ಮೀಸಲು ಇಡಲಾಗಿದ್ದು, ಪ್ರತ್ಯೇಕವಾಗಿ ಪ್ರತಿ ತಾಲೂಕಿಗೆ ಒಂದರಂತೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ರೋಗಿಗಳಿಗೆ ಸರಿಯಾದ ಸಮಯದಲ್ಲಿ ನಿಗದಿತ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಯಾವುದೇ ತೊಂದರೆಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಕೋವಿಡ್ ಪಾಸಿಟಿವ್ ಬಂದಿರುವ ರೋಗಿಗಳನ್ನು ಕೋವಿಡ್ ಸೆಂಟರ್​​ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಿಗೆ ಯಾವುದೇ ರೀತಿಯಲ್ಲಿ ಚಿಕಿತ್ಸೆ ಹಾಗೂ ಊಟದಲ್ಲಿ ತೊಂದರೆಗಳಾಗಬಾರದು. ಮೂಲಸೌಕರ್ಯದ ಜೊತೆಗೆ ಪ್ರತಿದಿನದ ಚಿಕಿತ್ಸೆಯನ್ನು ವ್ಯವಸ್ಥಿತ ರೀತಿ ಕೈಗೊಳ್ಳುವಂತೆ ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಸಾರಿ ಮತ್ತು ಐಎಲ್‍ಐ ರೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಹಚ್ಚಬೇಕು. ಜಿಲ್ಲೆಯಲ್ಲಿ ನೆಗಡಿ, ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆ ಇರುವ ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ: 1077ಗೆ ಕರೆ ಮಾಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಇಂಡಿ ಎಸಿ ಸ್ನೇಹಲ್ ಲೋಖಂಡೆ, ವಿಜಯಪುರ ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಡಾ. ಧಾರವಾಡಕರ ಸೇರಿದಂತೆ ಇತರರಿದ್ದರು.

ABOUT THE AUTHOR

...view details