ವಿಜಯಪುರ:ಕಳೆದ ಸಾಲಿನಲ್ಲಿ ಕೃಷ್ಣಾ ಮತ್ತು ಭೀಮಾ ನದಿಯ ಪ್ರವಾಹದಿಂದ ಜಿಲ್ಲೆಯ ನದಿ ತೀರದ ಪ್ರದೇಶಗಳು ಜಲಾವೃತಗೊಂಡು ಸಾರ್ವಜನಿಕರು ಅನೇಕ ತೊಂದರೆಗಳನ್ನು ಅನುಭವಿಸಿದ್ದರು. ಈ ರೀತಿಯ ಸಮಸ್ಯೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಆಲಮಟ್ಟಿ ಕೆ.ಬಿ.ಜೆ.ಎನ್.ಎಲ್ ವ್ಯವಸ್ಥಾಪಕ ನಿರ್ದೇಶಕರ ಆಡಳಿತ ಕಚೇರಿ ಸಭಾಂಗಣದಲ್ಲಿ ವಿವಿಧ ಜಿಲ್ಲೆಯ ಕಂದಾಯ ಅಧಿಕಾರಿಗಳು ಹಾಗೂ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳೊಂದಿಗೆ ನಡೆದ ಪ್ರವಾಹ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕಾಗಿ ಒಂದು ಸಮಿತಿಯನ್ನು ರಚಿಸಬೇಕು. ಮಹಾರಾಷ್ಟ್ರದಿಂದ ಬಿಡುಗಡೆಯಾದ ನೀರು ಕಳ್ಳೊಳ್ಳಿಗೆ ಬಂದು ನಂತರದಲ್ಲಿ ಆಲಮಟ್ಟಿ ಜಲಾಶಯ ತಲುಪುತ್ತದೆ. ಕಳ್ಳೊಳ್ಳಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಮುಂಚಿತವಾಗಿ ಆಲಮಟ್ಟಿ ಜಲಾಶಯದ ಅಧಿಕಾರಿಗಳಿಗೆ ತಿಳಿಸಬೇಕು. ಇದರಿಂದ ಆಲಮಟ್ಟಿ ಜಲಾಶಯದ ಹಿನ್ನಿರಿನ ಪ್ರಮಾಣದಲ್ಲಾಗುವ ಹಾನಿ ಹಾಗೂ ಮುಂದಿನ ಪ್ರದೇಶಗಳಲ್ಲಾಗುವ ಹಾನಿಯನ್ನು ನಿಯಂತ್ರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಸಮನ್ವಯ ಸಾಧಿಸಿ ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ಮಹಾರಾಷ್ಟ್ರ ರಾಜ್ಯದಿಂದ ಆಲಮಟ್ಟಿ ಜಲಾಶಯಕ್ಕೆ ಒಬ್ಬ ಅಧಿಕಾರಿಯನ್ನು ನಿಯೋಜಿಸಿದ್ದು, ಅವರು ಜಲಾಶಯದ ನೀರಿನ ಪ್ರಮಾಣ ಹಾಗೂ ಪ್ರತಿ ದಿನದ ವರದಿಯನ್ನು ಸಂಗ್ರಹಿಸುತ್ತಿದ್ದಾರೆ. ಅದೇ ರೀತಿ ಆಲಮಟ್ಟಿ ಜಲಾಶಯದಿಂದ ಮಹಾರಾಷ್ಟ್ರದ ಕೋಯ್ನಾ ಜಲಾಶಯಕ್ಕೆ ಒಬ್ಬರನ್ನು ನಿಯೋಜಿಸಿ ಕೋಯ್ನಾ ಜಲಾಶಯದ ನೀರಿನ ಪ್ರಮಾಣ ಹಾಗೂ ಪ್ರತಿದಿನದ ವರದಿಯನ್ನು ನೀಡುವಂತೆ ನೋಡಿಕೊಳ್ಳಬೇಕು. ವರದಿ ಆಧರಿಸಿ ಆಲಮಟ್ಟಿ ಜಲಾಶಯದ ನೀರಿನ ನಿರ್ವಹಣೆ ಕ್ರಮಗಳ ಕುರಿತು ಸಮಿತಿ ಮೂಲಕ ಕಾರ್ಯ ಕೈಗೊಳ್ಳಬೇಕು ಎಂದರು.
ಕಳೆದ ಸಾಲಿನ ಆಲಮಟ್ಟಿ ಜಲಾಶಯದ ನೀರಿನ ಮಟ್ಟಕ್ಕೆ ಹೋಲಿಸಿದಲ್ಲಿ ಈ ಸಾಲಿನಲ್ಲಿ ನೀರಿನ ಮಟ್ಟ ಕಡಿಮೆ ಇದೆ. ಮಳೆಯ ಪ್ರಮಾಣ ಹೆಚ್ಚಾದಲ್ಲಿ ಯಾವುದೇ ತೊಂದರೆಗಳು ಸಂಭವಿಸುವುದಿಲ್ಲ. ಆಲಮಟ್ಟಿ ಜಲಾಶಯದಲ್ಲಿ 86 ಟಿ.ಎಂ.ಸಿ ನೀರು ಇರುವುದರಿಂದ ಒಂದು ವೇಳೆ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದಲ್ಲಿ ಮುಂಜಾಗ್ರತೆಯಾಗಿ ಯಾವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವುದರ ಬಗ್ಗೆ ಕಂದಾಯ ಅಧಿಕಾರಿಗಳು ಹಾಗೂ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳು ಒಗ್ಗೂಡಿ ಚರ್ಚಿಸಿ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಬೇಕು ಎಂದರು.
ಈಗಾಗಲೇ ಮಹಾರಾಷ್ಟ್ರದ ಸಚಿವರೊಂದಿಗೆ ಹಾಗೂ ಕೊಲ್ಲಾಪುರ, ಸಾಂಗಲಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ಮಾಡಿ ಹಲವು ವಿಷಯಗಳ ಕುರಿತು ಚರ್ಚಿಸಲಾಗಿದೆ. ಮುಂಬರುವ ಕೆಲವು ದಿನಗಳಲ್ಲಿ ಕೊಲ್ಲಾಪುರ, ಸಾಂಗಲಿ, ವಿಜಯಪುರ, ರಾಯಚೂರು, ಬೆಳಗಾವಿ ಹಾಗೂ ಇನ್ನೂ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮತ್ತೊಂದು ಚರ್ಚೆಯನ್ನು ನಡೆಸಿ ಪ್ರವಾಹದ ಮುನ್ನೆಚ್ಚರಿಕೆ ಕೈಗೊಂಡು, ಸಾರ್ವಜನಿಕರಿಗೆ ತೊಂದರೆ ಆಗದಂತೆ ನೊಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಮಹಾರಾಷ್ಟ್ರ ರಾಜ್ಯದ 6 ಜಲಾಶಯಗಳ ನೀರಿನ ಪ್ರಮಾಣ ಸೇರಿದಂತೆ ಜಿಲ್ಲೆಯ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯ ಮತ್ತು ಸುತ್ತಲಿನ ಜಿಲ್ಲೆಗಳ ಜಲಾಶಯದ ನೀರಿನ ಪ್ರಮಾಣವನ್ನು ವಾಟ್ಸ್ ಆ್ಯಪ್ ಮೂಲಕ ಪ್ರತಿದಿನ ಮಾಹಿತಿಯನ್ನು ಪಡೆದುಕೊಳ್ಳಬೇಕು. ಕಳೆದ ಬಾರಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು. ಪ್ರವಾಹದ ಮುಂಜಾಗೃತಾ ಕ್ರಮವಾಗಿ ಕಂದಾಯ ಹಾಗೂ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.