ವಿಜಯಪುರ: ನಗರದ ಶಾಸ್ತ್ರೀಯ ಮಾರುಕಟ್ಟೆಯ ಬೀದಿ ಬದಿಯ ತರಕಾರಿ ಮಾರಾಟಗಾರರು ಹಾಗೂ ವ್ಯಾಪಾರಿಗಳನ್ನು ತೆರವು ಮಾಡಿದ್ದ ಹಿನ್ನೆಲೆ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದು, ಮಾಜಿ ಸಚಿವ ಎಂ.ಬಿ.ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ವ್ಯಾಪಾರಿಗಳೊಂದಿಗೆ ಪರ್ಯಾಯ ಜಾಗ ಕುರಿತು ಮಾತುಕತೆ ನಡೆಸಿದ್ದಾರೆ.
ಬೀದಿ ಬದಿಯ ವ್ಯಾಪಾರಿಗಳನ್ನು ಭೇಟಿ ಮಾಡಿದ ಎಂ.ಬಿ.ಪಾಟೀಲ್ - ವಿಜಯಪುರ ಶಾಸ್ತ್ರೀಯ ಮಾರುಕಟ್ಟೆಗೆ ಎಂಬಿ ಪಾಟೀಲ್ ಭೇಟಿ
ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ವಿಜಯಪುರ ನಗರದ ಶಾಸ್ತ್ರೀಯ ಮಾರುಕಟ್ಟೆಯ ಸುಮಾರು 230 ಬೀದಿ ಬದಿಯ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್, ಶೀಘ್ರವೇ ಸೂಕ್ತ ಪರಿಹಾರ ಹುಡುಕುವ ಭರವಸೆ ನೀಡಿದರು.
ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ವಿಜಯಪುರ ನಗರದ ಶಾಸ್ತ್ರೀಯ ಮಾರುಕಟ್ಟೆಯ ಬೀದಿ ಬದಿ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿದ ಬೆನ್ನಲ್ಲೇ ವ್ಯಾಪಾರಿಗಳು ರಸ್ತೆಯ ಜಾಗ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದು ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಬಳಿಕ ಜಿಲ್ಲಾಧಿಕಾರಿಗಳ ವೈ.ಎಸ್.ಪಾಟೀಲ ನೇತೃತ್ವದಲ್ಲಿ ವ್ಯಾಪಾರಿಗಳ ಮನವೂಲಿಸಿ ಪರ್ಯಾಯ ಜಾಗವನ್ನು ರೇಡಿಯೋ ಮೈದಾನದ ಆವರಣದಲ್ಲಿ ಗುರುತಿಸಲಾಯಿತು.
ಇನ್ನು ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್ ಮಾಧ್ಯಮದೊಂದಿಗೆ ಮಾತನಾಡಿ, ಜಿಲ್ಲಾಡಳಿತ ಮುಂಚಿತವಾಗಿ ಜಾಗ ನೀಡದೆ ತೆರವು ಕಾರ್ಯಾಚರಣೆಗೆ ಮುಂದಾಗಿದ್ದು, ಸುಮಾರು 230 ಬೀದಿ ಬದಿಯ ವ್ಯಾಪಾರಿಗಳು ಬೀದಿಪಾಲಾಗಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲಾಡಳಿತ ವ್ಯಾಪಾರಿಗಳಿಗೆ ಪರ್ಯಾಯ ಜಾಗ ಕಲ್ಪಿಸಲು ವಿಳಂಬ ಮಾಡುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ ಎಂದರು.