ವಿಜಯಪುರ :ಮಗನಿಗೆ ಬಂದ ಅಪರೂಪದ ಕಾಯಿಲೆ ಇಲ್ಲೊಂದು ಕುಟುಂಬವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಪ್ರತಿ ತಿಂಗಳೂ ಮಗನ ರಕ್ತ ಬದಲಿಸಬೇಕು. ಇಲ್ಲವಾದರೆ ನರಕಯಾತನೆಯನ್ನು ಪೋಷಕರೇ ಕಣ್ಣಾರೆ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಈ ದಂಪತಿಯ ನೆರವಿಗೆ ಬಿಎಲ್ಡಿಇ ಸಂಸ್ಥೆಯ ಅಧ್ಯಕ್ಷ ಎಂ ಬಿ. ಪಾಟೀಲ್ ನೆರವಿಗೆ ಬರುವ ಮೂಲಕ ಮಾನವೀಯತೆ ಮೆರೆದ್ದಾರೆ.
ಮಗುವಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾದ ಬಿಎಲ್ಡಿಇ ಸಂಸ್ಥೆ "ಮಗುವಿಗೆ ಥಲಸ್ಸೇಮಿಯಾ ಖಾಯಿಲೆ: ಧನ ಸಹಾಯಕ್ಕಾಗಿ ಅಂಗಲಾಚುತ್ತಿದೆ ಕುಟುಂಬ"ಎನ್ನುವ ಶೀರ್ಷಿಕೆ ಯಡಿ ಈಟಿವಿ ಭಾರತದಲ್ಲಿ ವರದಿ ಪ್ರಕಟವಾಗಿತ್ತು. ವರದಿ ಗಮನಿಸಿದ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು, ಬಾಲಕನ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ಮುಂದಾಗಿದ್ದಾರೆ. ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಈರಣ್ಣ ನಾಗೂರ ಮತ್ತು ಸವಿತಾ ನಾಗೂರ ದಂಪತಿಯ ಮೂರು ವರ್ಷದ ಗಂಡು ಮಗು ಥಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿದೆ.
ಮಗುವಿಗೆ ಚಿಕಿತ್ಸೆ ನೀಡಲು ಎಂ.ಬಿ. ಪಾಟೀಲ್ ಸೂಚನೆ :ಈ ಬಾಲಕನಿಗೆ ಪ್ರತಿ ತಿಂಗಳೂ ರಕ್ತ ಬದಲಿಸಬೇಕು. ಈಗಾಗಲೇ 32 ಬಾರಿ ರಕ್ತ ಬದಲಿಸಲಾಗಿದೆ. ಪ್ರತಿ ಬಾರಿ ರಕ್ತ ಬದಲಾಯಿಸಲು ಮತ್ತು ಔಷಧಿಗಾಗಿ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಆದರೆ, ಡಾಬಾದಲ್ಲಿ ಕೆಲಸ ಮಾಡುವ ಈರಣ್ಣ ನಾಗೂರ ಮತ್ತು ಕೂಲಿ ಕೆಲಸ ಮಾಡುವ ಸವಿತಾ ನಾಗೂರ ಅವರಿಗೆ ಮಗನ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಾಗಿತ್ತು. ಈ ವಿಷಯ ಈಟಿವಿ ಭಾರತದಲ್ಲಿ ಪ್ರಸಾರವಾದ ಮೇಲೆ ಅದನ್ನು ಗಮನಿಸಿದ ಎಂ. ಬಿ. ಪಾಟೀಲ್ ಅವರು ಮಗುವಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.
ಅಲ್ಲದೇ ಬಿಎಲ್ಡಿಇ ಸಂಸ್ಥೆಯ ಬಿ. ಎಂ. ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಬಿಎಲ್ಡಿಇ ಡೀಮ್ಡ್ ವಿವಿ ಉಪಕುಲಪತಿ ಡಾ. ಆರ್. ಎಸ್ ಮುಧೋಳ ಹಾಗೂ ಬಿಎಲ್ಡಿಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್ ವಿ. ಕುಲಕರ್ಣಿ ಅವರಿಗೆ ಕರೆ ಮಾಡಿ ಬಾಲಕನ ಪೋಷಕರನ್ನು ತಕ್ಷಣ ಸಂಪರ್ಕಿಸಿ ಚಿಕಿತ್ಸೆಗೆ ಅಗತ್ಯವಿರುವ ಸಕಲ ರೀತಿಯ ಸೌಲಭ್ಯ ಒದಗಿಸುವಂತೆ ಸೂಚನೆ ನೀಡಿದ್ದಾರೆ.
ಮಗುವಿಗೆ ನಮ್ಮ ಆಸ್ಪತ್ರೆಯಲ್ಲಿಯೇ ಸಂಪೂರ್ಣ ಉಚಿತ ಚಿಕಿತ್ಸೆ : ಎಂ. ಬಿ. ಪಾಟೀಲ ಅವರಿಂದ ಸೂಚನೆ ಬಂದ ತಕ್ಷಣ ಈರಣ್ಣ ನಾಗೂರ ಅವರನ್ನು ಸಂಪರ್ಕಿಸಿದ ಡಾ.ಆರ್. ಎಸ್ ಮುಧೋಳ ಮತ್ತು ಡಾ ಆರ್. ವಿ. ಕುಲಕರ್ಣಿ ಕೂಡಲೇ ವಿಜಯಪುರಕ್ಕೆ ಬರುವಂತೆ ತಿಳಿಸಿದ್ದಾರೆ. ತಮ್ಮ ಮಗನಿಗೆ ಉಚಿತ ಚಿಕಿತ್ಸೆ ದೊರೆಯುವ ಮಾಹಿತಿ ತಿಳಿದ ತಕ್ಷಣ ದಂಪತಿ ಬಿಎಲ್ಡಿಇ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಆಗ ಖುದ್ದು ಹಾಜರಿದ್ದ ಡಾ.ಆರ್. ಎಸ್. ಮುಧೋಳ ಮತ್ತು ಆಸ್ಪತ್ರೆ ಆರ್ಎಂಒ ಡಾ. ಅಶೋಕ ಥರಡಿ, ಚಿಕ್ಕಮಕ್ಕಳ ತಜ್ಞ ಡಾ. ಎಂ. ಎಂ. ಪಾಟೀಲ್ ಅವರಿಂದ ತಪಾಸಣೆ ನಡೆಸಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಕೊಂಡಿದ್ದಾರೆ. ಅಷ್ಟೇ ಅಲ್ಲ, ಡಾ. ಆರ್. ಎಸ್ ಮುಧೋಳ ನಾಗೂರ ದಂಪತಿಯನ್ನು ಭೇಟಿ ಮಾಡಿ, ಮಗುವಿಗೆ ನಮ್ಮ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತೇವೆ. ಇಲ್ಲಿಯೇ ಪ್ರತಿ ತಿಂಗಳು ರಕ್ತ ಬದಲಾವಣೆ ಮಾಡುತ್ತೇವೆ. ಬೇರೆ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ ಎಂದು ಆತ್ಮವಿಶ್ವಾಸ ತುಂಬಿದ್ದಾರೆ.
ಮಗುವನ್ನು ಗುಣಪಡಿಸಲು ಪ್ರಯತ್ನ ಮಾಡುತ್ತೇವೆ : ಈ ಕುರಿತು ಪ್ರತಿಕ್ರಿಯೆ ನೀಡಿದ ಡಾ. ಆರ್. ಎಸ್. ಮುಧೋಳ, ನಾಗೂರ ದಂಪತಿಯ ಪುತ್ರನ ಪರಿಸ್ಥಿತಿ ತಿಳಿದು ಬಿಎಲ್ಡಿಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ್ ಅವರು ಕೂಡಲೇ ಸ್ಪಂದಿಸಲು ಸೂಚನೆ ನೀಡಿದ್ದಾರೆ. ಅದರಂತೆ ಮೂರು ವರ್ಷದ ಮಗುವನ್ನು ನಮ್ಮ ಆಸ್ಪತ್ರೆಯಲ್ಲಿ ದಾಖಲು ಮಾಡಿ ಕೊಂಡಿದ್ದೇವೆ.
ಮಗುವಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತೇವೆ. ರಕ್ತ ಬದಲಾವಣೆ ಮಾಡುತ್ತೇವೆ. ಔಷಧಿಯನ್ನು ಕೂಡ ಉಚಿತವಾಗಿ ಒದಗಿಸುತ್ತೇವೆ. ಮಗುವಿಗೆ ಅಗತ್ಯವಾಗಿರುವ ಶಸ್ತ್ರಚಿಕಿತ್ಸೆ ಮತ್ತಿತರ ಹೆಚ್ಚಿನ ಚಿಕಿತ್ಸೆಗಳ ಕುರಿತು ನಮ್ಮ ವೈದ್ಯರು ಬೆಂಗಳೂರಿನಲ್ಲಿರುವ ತಜ್ಞ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತೇವೆ. ಮಗುವನ್ನು ಗುಣ ಪಡಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
ಎಂ.ಬಿ.ಪಾಟೀಲ್ರಿಗೆ ಕೃತಜ್ಞತೆ ಸಲ್ಲಿಸಿದ ಬಾಲಕನ ತಂದೆ : ಬಾಲಕನ ತಂದೆ ಈರಣ್ಣ ನಾಗೂರ ಮಾತನಾಡಿ, ನಮ್ಮ ಮಗನ ಚಿಕಿತ್ಸೆ ಕುರಿತು ಆತಂಕದಲ್ಲಿದ್ದ ನಮ್ಮ ಪರಿಸ್ಥಿತಿಯನ್ನು ತಿಳಿದು ಎಂ.ಬಿ. ಪಾಟೀಲ್ ಅವರು ನಮಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಿ ಎಂದು ಹೇಳಿದ್ದಾರೆ. ಅಲ್ಲದೆ ಮಗುವಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆ. ನಾನಾ ಆಸ್ಪತ್ರೆಗೆ ಅಲೆದಾಡಿ ಬೇಸತ್ತಿದ್ದ ನಮಗೆ ಎಂ ಬಿ. ಪಾಟೀಲ್‌ರು ಧೈರ್ಯ ತುಂಬಿ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುತ್ತಿದ್ದಾರೆ.
ಅವರ ಮೇಲೆ ನಮಗೆ ನಂಬಿಕೆಯಿದೆ. ನಮ್ಮ ಕಷ್ಟಕ್ಕೆ ಸ್ಪಂದಿಸಿರುವ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಷ್ಟೇ ಅಲ್ಲ, ಇಲ್ಲಿನ ವೈದ್ಯರೂ ಕೂಡ ಕಾಳಜಿಯಿಂದ ಸ್ಪಂದಿಸಿದ್ದಾರೆ. ನಮಗೆ ಧೈರ್ಯ ಬಂದಿದೆ. ನಾನು ನನ್ನ ಮಗನಿಗೆ ಇಲ್ಲಿಯೇ ಚಿಕಿತ್ಸೆ ಕೊಡಿಸುತ್ತೇನೆ. ಬೇರೆಲ್ಲೂ ಹೋಗಲ್ಲ. ನಮಗೆ ಸ್ಪಂದಿಸಿದವರೆಗೆ ಒಳ್ಳೆಯದಾಗಲಿ ಎಂದರು.