ವಿಜಯಪುರ: ವಿಜಯಪುರ ಬಸವಣ್ಣನವರಿಗೆ ಜನ್ಮ ನೀಡಿದ ಭೂಮಿ. ಕಾಯಕ ಮತ್ತು ದಾಸೋಹದ ತತ್ವಗಳ ಮಹತ್ವವನ್ನು ಜಗತ್ತಿಗೆ ಸಾರಿದವರು ಬಸವಣ್ಣ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಹೇಳಿದರು. ಜಿಲ್ಲೆಯಲ್ಲಿ ನಡೆದ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ತನ್ನದೇ ಆದ ಇತಿಹಾಸ ಇದೆ ಎಂದು ಬಸವಣ್ಣ ಅವರ ದಾರ್ಶನಿಕತ್ವದ ಮಹತ್ವ ಸಾರಿದರು.
ಡಾ. ಫ.ಗು ಹಳಕಟ್ಟಿ ಅವರು, 1924ರ ವೇಳೆಯಲ್ಲಿ 35ವರ್ಷ ನವ ಕರ್ನಾಟಕ, ಹಾಗೂ 24 ವರ್ಷ ಶಿವಾನುಭವ ಮಾಸ ಪತ್ರಿಕೆ ನಡೆಸಿದ್ದಾರೆ. ಇದಕ್ಕಾಗಿ ಅವರು ತಮ್ಮ ಮನೆಯನ್ನು ಮಾರಾಟ ಮಾಡಿದ್ರು. ಬಸವಾದಿ ತತ್ವಗಳು, ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದಾರೆ. ಫ ಗು ಹಳಕಟ್ಟಿ ಅವರು ಇರದಿದ್ದರೆ ಬಸವಾದಿ ಶರಣರ ಬಗ್ಗೆ ಗೊತ್ತಾಗುತ್ತಿರಲಿಲ್ಲ. ಬಸವ ತತ್ವಗಳನ್ನು ನಾಡಿನೆಲ್ಲಡೆ ಸಾರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಷ್ಟೆ ಮಹತ್ವವನ್ನು ಪತ್ರಿಕಾರಂಗ ಹೊಂದಿದ್ದು, ಇದನ್ನು ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ಥಂಬ ಎಂದು ಪರಿಗಣಿಸಲಾಗಿದೆ. ಈ ಅಂಗಳ ಬದ್ಧತೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು. ರಾಜಕೀಯ, ಅಧಿಕಾರಿ ವರ್ಗ ಸೇರಿದಂತೆ ಪತ್ರಿಕೆಯಲ್ಲೂ ಒಳ್ಳೆಯವರು ಕೆಟ್ಟವರು ಇದ್ದೇ ಇರುತ್ತಾರೆ. ಅದರಂತೆ ಪತ್ರಿಕಾ ರಂಗದಲ್ಲಿ ಬಹಳಷ್ಟು ಒಳ್ಳೆಯವರಿದ್ದಾರೆ ಎಂದರು. ಇನ್ನು ಇದೇ ವೇಳೆ ಪತ್ರಿಕಾ ಸಮ್ಮೇಳಕ್ಕೆ ನಿನ್ನೆ ಓರ್ವ ಸಚಿವರು ಆಗಮಿಸಿ ಇಲ್ಲಿ ಬಂದ ಅವರು, ಬೇರೆ ವಿಚಾರ ಮಾತನಾಡಿದ್ದಾರೆ ಎಂದು ಹೆಸರು ತೆಗೆದುಕೊಳ್ಳದೇ ಸಚಿವ ಗೋವಿಂದ ಕಾರಜೋಳ ವಿರುದ್ಧ ಹರಿಹಾಯ್ದರು. ಅವರಿಗೆ ಮಾತನಾಡುವ ಚಪಲ ಇದೆ, ನಾನು ಅವರ ಹೆಸರು ಹೇಳುವುದಿಲ್ಲ. ಇಲ್ಲಿ ಬಂದು ಸಮಸ್ಯೆಗಳ ಬಗ್ಗೆ ಮಾತಾಡಬೇಕಿತ್ತು, ರಾಜಕೀಯ ಮಾತನಾಡಬಾರದು ಎಂಬುದನ್ನು ಅವರು ಮರೆತರು ಎಂದು ಎಂ ಬಿ ಪಾಟೀಲ್ ಹೇಳಿದರು.