ಬೆಂಗಳೂರು/ವಿಜಯಪುರ : ರೈತ ಸಮುದಾಯವನ್ನು ಮಿಡತೆಗಳ ಹಾವಳಿಯಿಂದ ರಕ್ಷಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಎಂ ಬಿ ಪಾಟೀಲ್ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸರ್ಕಾರಕ್ಕೆ ಪತ್ರ ಬರೆದ ಎಂಬಿ ಪಾಟೀಲ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಕೃಷಿ ಸಚಿವ ಬಿ ಸಿ ಪಾಟೀಲ್ಗೆ ಪತ್ರ ಬರೆದು ಮನವಿ ಮಾಡಿರುವ ಎಂ ಬಿ ಪಾಟೀಲ್, ಜಗತ್ತು ಕೊರೊನಾ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿರುವ ಈ ಸಮಯದಲ್ಲಿ ಆಫ್ರಿಕಾದ ಅನೇಕ ದೇಶಗಳಲ್ಲಿ ಈ ವರ್ಷ ಭಾರಿ ಪ್ರಮಾಣದ ಮಿಡತೆಗಳು ಬೆಳೆಗಳನ್ನು ನಾಶ ಮಾಡಿವೆ. ಇದೀಗ ಉತ್ತರ ಭಾರತದ ರಾಜಸ್ಥಾನದಲ್ಲಿ ಪ್ರವೇಶಿಸಿದ, ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ಬೆಳೆದ ಬೆಳೆಗಳನ್ನು ತಿಂದು ಮುಗಿಸಿದೆ. ನಂತರ ಜೈಪುರಕ್ಕೆ ಲಗ್ಗೆ ಇಟ್ಟು, ಮಧ್ಯ ಪ್ರದೇಶ, ಉತ್ತರ ಪ್ರದೇಶ ಮಿಡತೆಗಳ ಹಾವಳಿ ತುತ್ತಾಗಿದೆ. ಪಂಜಾಬ ಮತ್ತು ಗುಜರಾತ್ ರೈತರಿಗೆ ಕೂಡ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ ಎಂದಿದ್ದಾರೆ.
ಮಿಡತೆಗಳು ಒಂದು ದಿನದಲ್ಲಿ 150 ಕಿ.ಮೀ ದೂರ ಹಾರಬಲ್ಲವು. ತನ್ನ ತೂಕದಷ್ಟು ಆಹಾರವನ್ನು ಒಂದು ಬಾರಿಗೆ ಸೇವಿಸಬಲ್ಲದು. ಅಲ್ಲದೆ, ಈ ಮಿಡತೆಗಳ ಸೈನ್ಯ ಒಂದು ಬಾರಿಗೆ 35 ಸಾವಿರ ಜನ ಆಹಾರ ಸೇವಿಸಿದಷ್ಟು ಆಹಾರ ಧಾನ್ಯಗಳನ್ನು ಕ್ಷಣಾರ್ಧದಲ್ಲಿ ತಿಂದು ಮುಗಿಸುವಷ್ಟು ಸಾಮರ್ಥ್ಯ ಹೊಂದಿದೆ ಎಂಬುದನ್ನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ತಿಳಿಸಿದ ಅವರು, ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯ ಪಾಕಿಸ್ತಾನದಲ್ಲಿ ಭಾರಿ ಪ್ರಮಾಣದ ಬೆಳೆಗಳನ್ನು ಹಾನಿ ಮಾಡುವುದರಿಂದ ಅಲ್ಲಿನ ಸರ್ಕಾರ ಫೆಬ್ರವರಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂಬುದನ್ನು ಈ ಸಮಯದಲ್ಲಿ ಸ್ಮರಿಸಬಹುದು. ದೇಶವೇ ಲಾಕ್‌ಡೌನ್‌ನಿಂದ ನಷ್ಟ ಅನುಭವಿಸಿದ ರೈತರು ಇದೀಗ ಮಿಡತೆಗಳ ಹಾವಳಿಯಿಂದ ಹೇಳತೀರದ ನಷ್ಟ ಎದುರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಕರ್ನಾಟಕವೂ ಹಾನಿ ಅನುಭವಿಸುವ ಸಾಧ್ಯತೆ ಇದ್ದು, ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಈಗಾಗಲೇ ಈ ಕುರಿತು ವರದಿ ಬಂದಿದೆ. ಮುಖ್ಯವಾಗಿ ಮುಂಬೈ-ಕರ್ನಾಟಕ ಪ್ರದೇಶ ಹಾನಿಗೊಳಗಾಗುವ ಸಂಭವ ಹೆಚ್ಚಾಗುತ್ತದೆ. ಆದ್ದರಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮಿಡತೆಗಳ ಹಾವಳಿಯಿಂದ ಎದುರಾಗುವ ನಷ್ಟಗಳ ಕುರಿತು ಸಮೀಕ್ಷೆ ಮಾಡಿ, ಮಿಡತೆ ಹಾವಳಿಯಿಂದ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.