ಮುದ್ದೇಬಿಹಾಳ : ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಮಾಸ್ಕ್ ಡೇ ಜನ ಜಾಗೃತಿ ಜಾಥಾಕ್ಕೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಚಾಲನೆ ನೀಡಿದರು.
ಪಟ್ಟಣದ ಪುರಸಭೆಯಿಂದ ಆರಂಭವಾದ ರ‍್ಯಾಲಿ ಪ್ರಮುಖ ಬೀದಿಗಳಲ್ಲಿ ಸಾಗಿ ಇಂದಿರಾ ಗಾಂಧಿ ವೃತ್ತದಲ್ಲಿ ಕೊನೆಗೊಂಡಿತು. ಈ ವೇಳೆ ಮಾತನಾಡಿದ ಶಾಸಕ ನಡಹಳ್ಳಿ, ಮಾಸ್ಕ್ ಧರಿಸದಿದ್ದರೆ 200ರೂ. ದಂಡ ಹಾಕಲಾಗುತ್ತದೆ. ಇದಕ್ಕೆ ಆಸ್ಪದ ನೀಡದೇ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಬೇಕು ಎಂದು ತಿಳಿಸಿದರು.
ಮುದ್ದೇಬಿಹಾಳದಲ್ಲಿ ಮಾಸ್ಕ್ ಡೇ ಕಾರ್ಯಕ್ರಮ ಇನ್ನು ಪಟ್ಟಣದ ಎಪಿಎಂಸಿಯಲ್ಲಿ ಅಧ್ಯಕ್ಷ ಗುರು ತಾರನಾಳ,ಉಪಾಧ್ಯಕ್ಷ ಹನುಮಂತ ನಾಯ್ಕ ವರ್ತಕರಿಗೆ,ಹಮಾಲರಿಗೆ ಮಾಸ್ಕ್ಗಳನ್ನು ವಿತರಿಸುವ ಮೂಲಕ ಮಾಸ್ಕ್ ದಿನಾಚರಣೆಯನ್ನು ಆಚರಿಸಿದರು.
ಸ್ಕೌಟ್ಸ್ ವಿದ್ಯಾರ್ಥಿನಿಯಿಂದ ಸಾರ್ವಜನಿಕರಿಗೆ ಮನವಿ
ಸ್ಥಳೀಯ ಸ್ಕೌಟ್ಸ್ ಹಾಗೂ ಗೈಡ್ಸ್ ಸಂಸ್ಥೆಯ ವತಿಯಿಂದ ಶಿಕ್ಷಕ ಜಿ.ಎಚ್.ಚವ್ಹಾಣ ನೇತೃತ್ವದಲ್ಲಿ ಮಾಸ್ಕ್ ಧರಿಸುವ ಕುರಿತು ಜಾಗೃತಿ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ರಕ್ಷಿತಾ ರಾಠೋಡ್, ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಎಲ್ಲರೂ ಮಾಸ್ಕ್ ಧರಿಸಿ. ಮಾರುಕಟ್ಟೆಗೆ ಬರುವಾಗ ಚಿಕ್ಕ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಬನ್ನಿ. ಸಂತೆಯಿಂದ ಖರೀದಿಸಿ ತರುವ ತರಕಾರಿಯನ್ನು ಉಪ್ಪು ನೀರಿನಲ್ಲಿ ತೊಳೆದು ಬಳಸಿ ಎಂದು ಜನತೆಗೆ ಸಲಹೆ ನೀಡಿದರು.
ನಂತರ ಮಾತನಾಡಿದ ಶಿಕ್ಷಕ ಜಿ.ಎಚ್.ಚವ್ಹಾಣ್, ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರ ಪಾಲನೆ ಮಾಡಿದ್ದಲ್ಲಿ ಕೊರೊನಾದಿಂದ ದೂರವಿರಬಹುದಾಗಿದೆ ಎಂದು ತಿಳಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಾಸ್ಕ್ ಧರಿಸುವಂತೆ ಸ್ಕೌಟ್ಸ್ ವಿದ್ಯಾರ್ಥಿಗಳು ಜಾಗೃತಿ ಜಾಥಾ ಮಾಡಿದರು.