ವಿಜಯಪುರ :ಕೋವಿಡ್ ಹೊಡೆತದಿಂದ ತತ್ತರಿಸಿರುವ ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಡ್ಯಾಫೋಡಿಲ್ಸ್ ಆಂಗ್ಲ ಮಾಧ್ಯಮ ಶಾಲೆಯನ್ನು ಮುಚ್ಚಲು ಆಡಳಿತ ಮಂಡಳಿ ನಿರ್ಧರಿಸಿದೆ.
ಡ್ಯಾಫೋಡಿಲ್ಸ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಮೋಹನ್ ಡ್ಯಾಪೋಡಿಲ್ಸ್ ಶಾಲೆಯಲ್ಲಿ ಎಲ್ಕೆಜಿಯಿಂದ ಎಸ್ಸೆಸೆಲ್ಸಿವರೆಗೆ ತರಗತಿಗಳು ನಡೆಯುತ್ತಿತ್ತು. ಸುಮಾರು 450 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು. 12 ರಿಂದ 15 ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಕೋವಿಡ್ ಕಾರಣದಿಂದ ಕಳೆದ ಒಂದು ವರ್ಷದಿಂದ ಶಾಲೆಯಲ್ಲಿ ತರಗತಿಗಳು ನಡೆಯುತ್ತಿರಲಿಲ್ಲ. ಹಾಗಾಗಿ, ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಆದರೂ, ಶಿಕ್ಷಕರಿಗಾಗಲಿ, ವಿದ್ಯಾರ್ಥಿಗಳಿಗಾಗಲಿ ಆನ್ಲೈನ್ ಶಿಕ್ಷಣ ತೃಪ್ತಿದಾಯಕವಾಗದ ಕಾರಣ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಶಾಲೆಯನ್ನು ಶಾಶ್ವತವಾಗಿ ಮುಚ್ಚಲು ತೀರ್ಮಾನಿಸಿದೆ.
ಇದನ್ನೂ ಓದಿ: ಕೊರೊನಾ ಆತಂಕದ ಮಧ್ಯೆಯೂ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಭಾರಿ ದೇಣಿಗೆ ಸಂಗ್ರಹ
ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗಿತ್ತು. ಆದರೆ, ಏಕಾಏಕಿ ಶಾಲೆ ಮುಚ್ಚಿದ ಕಾರಣ, ಪೋಷಕರಲ್ಲಿ ಗೊಂದಲ ಉಂಟಾಗಿತ್ತು. ಆದರೆ, ಶಾಲಾ ಆಡಳಿತ ಮಂಡಳಿ ಪ್ರತಿಯೊಬ್ಬ ಪೋಷಕರಿಗೂ ವಿದ್ಯಾರ್ಥಿಗಳ ಟಿಸಿ ನೀಡಿ, ಬೇರೆ ಶಾಲೆಗೆ ದಾಖಲಾತಿ ಪಡೆಯುವಂತೆ ಮನವಿ ಮಾಡಿದೆ.
20 ವರ್ಷಗಳ ಹಿಂದೆ ಡ್ಯಾಪೋಡಿಲ್ಸ್ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲಾಗಿತ್ತು. ಸಿಬಿಎಸ್ಸಿ ಪಠ್ಯಕ್ರಮದಂತೆ ಈ ಶಾಲೆಯಲ್ಲಿ ತರಗತಿಗಳು ನಡೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳ ಪ್ರಭಾವಕ್ಕೆ ಸಿಲುಕಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿದ್ದರೆ, ನಗರದ ಪ್ರತಿಷ್ಠಿತ ಖಾಸಗಿ ಶಾಲೆ ಕೋವಿಡ್ ಹೊಡೆತಕ್ಕೆ ಸಿಲುಕಿ ಶಾಶ್ವತವಾಗಿ ಬಾಗಿಲು ಮುಚ್ಚಲು ಮುಂದಾಗಿದೆ.