ವಿಜಯಪುರ:ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನು ಪತಿಯೇ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊಲವಲಯದ ತೊರವಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಸಂತೋಷ ಈಟಿ(32)ಪತ್ನಿ ಶ್ರೀದೇವಿ ಈಟಿ(28) ಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮದುವೆಯಾದ ಸಂದರ್ಭದಲ್ಲಿ ಚೆನ್ನಾಗಿಯೇ ಇದ್ದ ಸಂತೋಷ ಬರಬರುತ್ತಾ ಹೆಂಡತಿಯ ನಡತೆ ಶಂಕಿಸಿ ಮನೆಯಲ್ಲಿ ಗಲಾಟೆ ಮಾಡಲು ಆರಂಭಿಸಿದ. ಮೂರು ಮಕ್ಕಳಾದರೂ ಹೆಂಡತಿಯ ಮೇಲೆ ಸಂಶಯ ಪಡುತ್ತಿದ್ದ. ಮೃತ ಶ್ರೀದೇವಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಫಾಯಿ ಕರ್ಮಚಾರಿಯಾಗಿ ಆಗಿ ಕೆಲಸ ನಿರ್ವಹಿಸುತ್ತಿದ್ದಳು. ಸಂತೋಷ ಕೂಡಾ ಕೂಲಿ ಕೆಲಸ ಮಾಡಿಕೊಂಡಿದ್ದ. ಆದರೆ ಈತನಿಗೆ ಹೆಂಡತಿಯ ಮೇಲೆ ಎಷ್ಟು ಸಂಶಯ ಎಂದರೆ ಹೆಂಡತಿ ಕೆಲಸ ಮಾಡುವ ಆಸ್ಪತ್ರೆಯ ಬಳಿ ಹೋಗಿ ಅವಳಿಗೆ ಗೊತ್ತಿಲ್ಲದಂತೆ ನಿಲ್ಲುತ್ತಿದ್ದನಂತೆ. ಅಷ್ಟೇ ಅಲ್ಲದೇ ಪ್ರತಿ ದಿನ ಮನೆಯಲ್ಲಿ ಕುಡಿದು ಬಂದು ಗಲಾಟೆ ಮಾಡುತ್ತಿದ್ದನಂತೆ. ಈತನ ಕಿರಿಕಿರಿಗೆ ಬೇಸತ್ತ ಹೆಂಡತಿ ತೊರವಿ ಗ್ರಾಮದಲ್ಲಿರುವ ತನ್ನ ತವರು ಮನೆಗೂ ಹೋಗಿದ್ದಳು.