ವಿಜಯಪುರ: ಪಾಕಿಸ್ತಾನ ಪರ ಬರಹ ಬರೆದು ಅದನ್ನು ವಾಟ್ಸಪ್ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಕಾನಬಾವಿ ನಿವಾಸಿ ವೀರೇಶ ಪರಯ್ಯ ಕರ್ಪೂರಮಠ (31) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನಂತರ ಆತನನ್ನು ವಿಜಯಪುರದ ದರ್ಗಾ ಜೈಲಿಗಟ್ಟಿರುವ ಪ್ರಕರಣ ಸೋಮವಾರ ನಡೆದಿದೆ.
ಆರೋಪಿ ವೀರೇಶನು ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ನ ಅಪ್ಪಾಜಿ ನಾಡಗೌಡರ ಹೆಸರಿನ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಬರಹವನ್ನು ಪೋಸ್ಟ್ ಮತ್ತು ಶೇರ್ ಮಾಡಿದ್ದ. ಇದು ಅಲ್ಲಿನ ಅನ್ಯ ಕೋಮಿನವರಿಗೆ ಗೊತ್ತಾಗಿ ಆತನನ್ನು ನಾಲತವಾಡದಲ್ಲಿರುವ ಪೊಲೀಸ್ ಔಟ್ಪೋಸ್ಟ್ಗೆ ಕರೆತಂದು ಪೊಲೀಸರಿಗೆ ಒಪ್ಪಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ವಿಚಾರಣೆ ನಡೆಸಿದ ಮೇಲೆ ವೀರೇಶ ತಪ್ಪು ಮಾಡಿರುವುದು ಗೊತ್ತಾಗಿತ್ತು.
ಅಲ್ಲಿಂದ ಆರೋಪಿಯನ್ನು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗಿತ್ತು. ವೀರೇಶನು ಬರಹ ರೂಪದಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಿರುವುದು ದೃಢಪಟ್ಟಿರುವ ಹಿನ್ನೆಲೆ ನಾಲತವಾಡ ಭಾಗದ ಬೀಟ್ ಪೊಲೀಸ್ ಪಿ.ಎಸ್. ಪಾಟೀಲ ಸರ್ಕಾರದ ಪರವಾಗಿ ಸಲ್ಲಿಸಿದ ದೂರಿನನ್ವಯ ಪೂರ್ವಾಗ್ರಹಪೀಡಿತ ಆರೋಪದಡಿ ಪಿಎಸ್ಐ ಆರೀಫ್ ಮುಷಾಪುರಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಕೊಂಡಿದ್ದಾರೆ.