ವಿಜಯಪುರ: ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳ ಹೆಸರು ಹೇಳಿ ದೈವ ಭವಿಷ್ಯ ನುಡಿದಿದ್ದು, ರಾಜಕಾರಣಿಗಳಿಗೆ ಶಾಕ್ ನೀಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ತಿಕ್ಕಾಟದಿಂದ ರಾಜ್ಯ ರಾಜಕೀಯ ಅಲ್ಲೋಲ್ಲ ಕಲ್ಲೋಲ ಆಗಲಿದೆ ಎಂದು ಮಕಣಾಪುರದ ದೈವ ಕಾರ್ಣಿಕ ನುಡಿದಿದೆ.
ಪ್ರತಿ ವರ್ಷ ನಡೆಯುವ ಚಡಚಣ ತಾಲೂಕಿನ ಮಕಣಾಪುರದ ಶ್ರೀ ಸೋಮಲಿಂಗ ದೇವರ ಜಾತ್ರೆಯ ಕೊನೆ ದಿನ ನಡೆಯುವ ಕಾರ್ಣಿಕ ಹೇಳಿಕೆಯಲ್ಲಿ ಸಿದ್ದಿ ಪುರುಷ ಕಲ್ಲೂರ ಸಿದ್ಧ ರಾಜಕೀಯ ಭವಿಷ್ಯ ನುಡಿದು ಅಚ್ಚರಿ ಮೂಡಿಸಿದ್ದಾರೆ. ಇದೇ ಮೊದಲ ಬಾರಿ ರಾಜಕೀಯ ಪಕ್ಷಗಳ ಹೆಸರು ಬಳಸಿ ಭವಿಷ್ಯ ನುಡಿದ್ದಾರೆ. ಕಾಂಗ್ರೆಸ್-ಬಿಜೆಪಿ ಪಕ್ಷಗಳ ಹೆಸರು ಹೇಳಿ ದೈವ ನುಡಿದ ಭವಿಷ್ಯ ಕೇಳಿ ಭಕ್ತರು ದಂಗಾಗಿದ್ದಾರೆ.
ಶಿವನ ಅವತಾರ ಸೋಮಲಿಂಗ ದೇವರ ಸೇವಕನಾಗಿರುವ ಪವಾಡ ಪುರುಷ ಕಲ್ಲೂರುಸಿದ್ಧ ಭವಿಷ್ಯವನ್ನು ಜನರು ನಂಬುತ್ತಾರೆ. ನಾಲಿಗೆ ಮೇಲೆ ಶಿವನೆ ಕುಳಿತು ಭವಿಷ್ಯ ನುಡಿಯುತ್ತಾನೆ ಎಂಬ ನಂಬಿಕೆಯನ್ನು ಭಕ್ತರು ಹೊಂದಿದ್ದಾರೆ. ಕೈಯ್ಯಲ್ಲಿ ಬೆಳ್ಳಿ ತ್ರಿಶೂಲ, ಮುಖಕ್ಕೆ ದೇವರ ಮುಖವಾಡ ಧರಿಸಿ ಕಾರ್ಣಿಕ ನುಡಿಯಲಾಗುತ್ತದೆ.