ಕರ್ನಾಟಕ

karnataka

By

Published : Mar 10, 2021, 3:45 PM IST

ETV Bharat / state

ಮಹಾಶಿವರಾತ್ರಿ: ಶಿವಗಿರಿ ತ್ರಿನೇತ್ರನ ಮೂರ್ತಿಗೆ ವಿಶೇಷ ಪೂಜೆ

ಮಹಾಶಿವರಾತ್ರಿ ಪ್ರಯುಕ್ತ ವಿಜಯಪುರದ ಶಿವಗಿರಿಯಲ್ಲಿರುವ ಬೃಹತ್ ಶಿವನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲು ಭರದ ಸಿದ್ಧತೆ ನಡೆಯುತ್ತಿದೆ.

mahashivaratri-special-pooja-preparation-in-vijayapura
ಶಿವಗಿರಿ ತ್ರಿನೇತ್ರ

ವಿಜಯಪುರ: ಗುಮ್ಮಟನಗರಿಯಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಗರದ ಹೊರವಲಯದ ಶಿವಗಿರಿಯಲ್ಲಿರುವ ಬೃಹತ್ ಶಿವನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ. ಕೊರೊನಾ ಕಾರಣ ಶಿವರಾತ್ರಿಯನ್ನು ಸರಳವಾಗಿ ಆಚರಿಸಲು ಜಿಲ್ಲಾಡಳಿತ ಸೂಚಿಸಿದ್ದು, ಭಕ್ತರ ಆಗಮನಕ್ಕೆ ಹಲವು ಷರತ್ತುಗಳನ್ನು ವಿಧಿಸಿದೆ.

ಸಿಂದಗಿ ರಸ್ತೆಯಲ್ಲಿರುವ ಶಿವಗಿರಿಯಲ್ಲಿರುವ ಶಿವನ ಮೂರ್ತಿ 85 ಅಡಿ ಎತ್ತರವಿದ್ದು ಇದು ದೇಶದ 2ನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ. 2006ರಲ್ಲಿ ಚಿತ್ರ ನಿರ್ಮಾಪಕ ಬಸಂತಕುಮಾರ ಪಾಟೀಲ ಹಾಗೂ ಅವರ ಸಹೋದರರು ಸೇರಿ ಈ ಶಿವಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. 1500 ಟನ್ ತೂಕ, 150 ಅಡಿ ಅಗಲ ಹೊಂದಿರುವ ಶಿವಮೂರ್ತಿ ಇರುವ ಸ್ಥಳವನ್ನು ವಿಜಯಪುರದಲ್ಲಿ ಪ್ರೇಕ್ಷಣೀಯ ಸ್ಥಳವಾಗಿ ಗುರುತಿಸಲಾಗುತ್ತದೆ.

2006ರಲ್ಲಿ ಈ ಮೂರ್ತಿ ಸ್ಥಾಪನೆಗೆ ಒಂದು ಕೋಟಿ ರೂ. ವೆಚ್ಚ ತಗುಲಿತ್ತು. ಶಿವನಮೂರ್ತಿ ನಿರ್ಮಾಣವಾದ ಮೇಲೆ ಆಚರಿಸಿದ ಮೊದಲ ಮಹಾಶಿವರಾತ್ರಿ ದಿನದಂದು ಶಿವಗಿರಿ ಟ್ರಸ್ಟ್ ಸಂಸ್ಥಾಪಕ ಬಸಂತಕುಮಾರ ಪಾಟೀಲ ತಮ್ಮ ತಾಯಿ ತುಳಜಾಬಾಯಿ ಪಾಟೀಲ ಅವರಿಗೆ ಬಂಗಾರದ ತುಲಾಭಾರ ಮಾಡಿದ್ದರು. ಒಟ್ಟು 58 ಕೆ.ಜಿ ಬಂಗಾರ ತುಲಾಭಾರದಲ್ಲಿ ಬಳಕೆಯಾಗಿತ್ತು.‌ ಈಗ ಅದೇ ಚಿನ್ನ ಬಳಕೆ ಮಾಡಿಕೊಂಡು ಕಗ್ಗೂಡ ಗ್ರಾಮದ ಸುಮಾರು 5 ಸಾವಿರ ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು, ಅವರಿಗೆ ವಿದ್ಯಾಭ್ಯಾಸ ನೀಡಲು ಮುಂದಾಗಿದ್ದಾರೆ.

ಇದನ್ನೂ ಓದಿ:ತ್ರಿನೇಶ್ವರ ಸ್ವಾಮಿಗೆ 11 ಕೆಜಿ ತೂಕದ ಚಿನ್ನದ ಶಿವನ ಮುಖವಾಡ ಹಸ್ತಾಂತರ

ಮಹಾಶಿವರಾತ್ರಿ ಇರುವ ಕಾರಣ, ಬೆಳಗ್ಗೆಯಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಶಿವಗಿರಿಯನ್ನು ಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಭಕ್ತರಿಗೆ ಕಡ್ಡಾಯವಾಗಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಪಾಡಿ ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಂಜೆ ಬೃಹತ್ ರಥೋತ್ಸವ ನಡೆಯಲಿದೆ. ಇದರ ಜತೆ ಇಡೀ ದಿನ ದಾಸೋಹ ಜರುಗಲಿದೆ. ಶಿವಗಿರಿಗೆ ಬರುವ ಭಕ್ತರಿಗೆ ಖರ್ಜೂರ, ದ್ರಾಕ್ಷಿ ಹಾಗೂ ಬಾಳೆಹಣ್ಣಿನ ವ್ಯವಸ್ಥೆಯನ್ನು ಶಿವಗಿರಿ ಟ್ರಸ್ಟ್ ಮಾಡಲಿದೆ.

ಪ್ರತಿ ಮಹಾಶಿವರಾತ್ರಿ ದಿನ ಶಿವಗಿರಿಯ ಸುತ್ತಮುತ್ತಲೂ ಅದ್ದೂರಿ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಈ ವರ್ಷ ಕೊರೊನಾ ಸಾಂಕ್ರಾಮಿಕ ಪಿಡುಗಿನ ಕಾರಣ, ಜಾತ್ರಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ. ಭಕ್ತರು ಶಿವನ ದರ್ಶನ ಮಾಡಿ ಪೂಜೆ ಸಲ್ಲಿಸಬಹುದಾಗಿದೆ.

ABOUT THE AUTHOR

...view details