ವಿಜಯಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗಗಳಿಗೆ ಮಹಾರಾಷ್ಟ್ರ ಉದ್ಯೋಗ ಸಚಿವ ಉದಯ ಸಾವಂತ ಇಂದು ಭೇಟಿ ನೀಡಿದ್ದು, ಗಡಿನಾಡ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿದ್ದಾರೆ. ನಾಳೆ ಉದಯ ಸಾವಂತ ಕರ್ನಾಟಕದ ಬೆಳಗಾವಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಅವರಿಂದು ಮಹಾರಾಷ್ಟ್ರದಲ್ಲಿರುವ ಗಡಿಪ್ರದೇಶ ಜತ್ ತಾಲೂಕಿನ ಸಂಖ, ತಿಕೊಂಡಿ ಗ್ರಾಮಗಳಿಗೆ ಬಂದಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರ ಗಡಿ ಭಾಗದ 48 ಹಳ್ಳಿಗಳ ಕನ್ನಡಿಗರು ತಮಗೆ ಮಹಾರಾಷ್ಟ್ರದಿಂದ ಮೂಲಸೌಲಭ್ಯ ದೊರೆಯುತ್ತಿಲ್ಲ ಎಂದು ಆರೋಪಿಸಿ, ತಮ್ಮನ್ನು ಕರ್ನಾಟಕಕ್ಕೆ ಕಳುಹಿಸಿ ಎಂದು ಆಯಾ ಗ್ರಾಮ ಪಂಚಾಯಿತಿಯಲ್ಲಿ ಠರಾವು ಪಾಸ್ ಮಾಡಿದ್ದರು. ಇದರಿಂದ ಆಘಾತಕ್ಕೊಳಗಾಗಿದ್ದ ಮಹಾರಾಷ್ಟ್ರ ಸರ್ಕಾರ ಕನ್ನಡಿಗರ ಬೇಡಿಕೆಗೆ ಮನ್ನಣೆ ನೀಡಿ ಕಣ್ಣೊರೆಸುವಂತೆ ಸ್ವಲ್ಪ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿತ್ತು.
ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಗಡಿ ಕನ್ನಡಿಗರನ್ನು ಸಮಾಧಾನಪಡಿಸಲು ಉದ್ಯೋಗ ಸಚಿವ ಉದಯ ಸಾವಂತ ಗಡಿ ಗ್ರಾಮಗಳಿಗೆ ಭೇಟಿ ಕೊಟ್ಟಿದ್ದಾರೆ. ಸಚಿವರ ಸಮ್ಮುಖದಲ್ಲಿಯೇ ನಮ್ಮ ಬೇಡಿಕೆ ಈಡೇರದಿದ್ದರೆ ನಮಗೆ ಕರ್ನಾಟಕಕ್ಕೆ ಹೋಗಲು NOC ಕೊಡಿ ಎಂದು ಗಡಿ ಕನ್ನಡಿಗರು ಸಚಿವರೆದುರೇ ಆಕ್ರೋಶ ಹೊರಹಾಕಿದ್ದಾರೆ.