ವಿಜಯಪುರ: ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಹಾಗೂ ಆತನ ಸಹಚರರ ಮೇಲೆ ಗುಂಡಿನ ದಾಳಿ ನಡೆದು ಮಾ. 2ಕ್ಕೆ ಐದು ತಿಂಗಳು ಕಳೆದಿವೆ. ಈಗ ಸಾಹುಕಾರ ಭೈರಗೊಂಡ ಚೇತರಿಸಿಕೊಂಡು ವಾಪಸ್ ಉಮರಾಣಿಯ ತನ್ನ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ. ತಾನು ಕಳೆದ ಐದು ತಿಂಗಳು ಜೀವನ್ಮರಣದ ಮಧ್ಯೆ ಯಾವ ರೀತಿ ಹೋರಾಟ ನಡೆಸಿದೆ ಎಂಬುದರ ಮಾಹಿತಿಯನ್ನು ಸವಿವರವಾಗಿ ಬಿಚ್ಚಿಟ್ಟಿದ್ದಾನೆ.
ಎರಡು ಕುಟುಂಬಗಳ ದ್ವೇಷದಿಂದ ಭೀಮಾತೀರ ಕಳೆದ ಮೂರು ದಶಕಗಳಿಂದ ರಕ್ತಸಿಕ್ತ ವಾತಾವರಣದಲ್ಲಿಯೇ ಕಳೆದು ಹೋಗಿದೆ. ಭೀಮೆಯ ತಿಳಿ ನೀರಿನಲ್ಲಿ ದ್ವೇಷದ ರಕ್ತ ಸೇರಿ ಭೀಮಾತೀರ ರಾಜ್ಯದಲ್ಲಿಯೇ ಕುಖ್ಯಾತಿ ಪಡೆದುಕೊಂಡಿದೆ. ಭೀಮಾತೀರದ ರಕ್ತಸಿಕ್ತ ಇತಿಹಾಸ ಹೇಗಿದೆ? ಮಹಾದೇವ ಸಾಹುಕಾರ ಭೈರಗೊಂಡನ ಮೇಲೆ ದಾಳಿ ನಡೆಸಿದವರು ಯಾರು ಎನ್ನುವ ಪೂರ್ಣ ಡೀಟೆಲ್ಸ್ ಇಲ್ಲಿದೆ.
ಭೀಮಾತೀರದ ನಟೋರಿಯಸ್ ಧರ್ಮರಾಜ್ ಚಡಚಣ ನಕಲಿ ಎನ್‍ಕೌಂಟರ್ ಹಾಗೂ ಆತನ ಸಹೋದರ ಗಂಗಾಧರ ಚಡಚಣ ನಿಗೂಢ ಸಾವು, ಭೀಮಾತೀರದಲ್ಲಿ ಮತ್ತೊಮ್ಮೆ ರಕ್ತ ಹರಿಯುವಂತೆ ಮಾಡಿತ್ತು. ಈ ಕೊಲೆಗಳಿಗೆ ನೇರವಾಗಿ ಮಹಾದೇವ ಸಾಹುಕಾರ ಭೈರಗೊಂಡ ಕಾರಣವೆಂದು ಕಳೆದ ನವೆಂಬರ್ 2ರಂದು ಕನ್ನೊಳ್ಳಿ ಕ್ರಾಸ್ ಬಳಿ ಸಾಹುಕಾರ ಚಡಚಣಕ್ಕೆ ಹೋಗುತ್ತಿದ್ದಾಗ ಏಕಾಏಕಿ 15-20 ಜನ ಗುಂಡಿನ ದಾಳಿ ನಡೆಸಿದ್ದರು. ಅದೃಷ್ಟವಶಾತ್ ಮಹಾದೇವ ಸಾಹುಕಾರ ಭೈರಗೊಂಡಗೆ ಎರಡು ಗುಂಡು ತಗುಲಿದರೂ ಬದುಕುಳಿದಿದ್ದ. ಈತನ ಗನ್ ಮ್ಯಾನ್ ಹಾಗೂ ಸಹಚರ ದಾಳಿಯಲ್ಲಿ ಸಾವನ್ನಪ್ಪಿದ್ದರು. ಅಂದು ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಾದೇವ ಸಾಹುಕಾರ ಭೈರಗೊಂಡ ವಿಜಯಪುರ ಹಾಗೂ ಹೈದರಾಬಾದ್ ಆಸ್ಪತ್ರೆಯಲ್ಲಿ ಐದು ತಿಂಗಳು ಚಿಕಿತ್ಸೆ ಪಡೆದುಕೊಂಡು ಸ್ವಗ್ರಾಮ ಚಡಚಣ ತಾಲೂಕಿನ ಉಮರಾಣಿ ಗ್ರಾಮದ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ.
ಇದೀಗ ತನ್ನ ಅನುಭವವನ್ನು ಹಂಚಿಕೊಂಡಿರುವ ಅವರು, ತಾನು ಒಳ್ಳೆಯವನಾಗಿರುವ ಕಾರಣ ಬದುಕಿ ಉಳಿದಿದ್ದೇನೆ. ಆಗ ನನ್ನ ಸಹಾಯಕ್ಕೆ ಪೊಲೀಸರು ಬಂದಿದ್ರು, ಅಂದು ನನ್ನ ಬಳಿ ಬುಲೆಟ್ ಪ್ರೂಫ್ ಜಾಕೆಟ್ ಇದ್ದರೂ, ಸೆಕೆ ಇದ್ದ ಕಾರಣ ಅದನ್ನು ತೆಗೆದು ಕಾರಿನಲ್ಲಿಟ್ಟಿದ್ದೆ, ದೇವರು ನನ್ನ ಜತೆ ಇದ್ದರು. ಆ ಕಾರಣಕ್ಕೆ ನಾನು ಬದುಕುಳಿದು ಬಂದಿದ್ದೇನೆ ಎಂದರು.