ವಿಜಯಪುರ: ದ್ರಾಕ್ಷಿ, ನಿಂಬೆ ಬೆಳೆಗೆ ಸೂಕ್ತವಾಗಿರುವ ವಿಜಯಪುರದ ಹವಾಮಾನದಲ್ಲಿ ಸ್ಟ್ರಾಬೆರಿ ಬೆಳೆಯುವುದು ಕಷ್ಟಸಾಧ್ಯ. ಇದನ್ನು ಸವಾಲಾಗಿ ಸ್ವೀಕರಿಸಿದ ಮಹಿಳಾ ವಿಶ್ವವಿದ್ಯಾಲಯ ಮಹಿಳಾ ಕೌಶಲ್ಯ ಪಾರ್ಕ್ನ ಎರಡು ಪಾಲಿ ಹೌಸ್ನಲ್ಲಿ ಸ್ಟ್ರಾಬೆರಿ ಬೆಳೆಯಲಾಗುತ್ತಿದೆ. ಸದ್ಯ ಸ್ಟ್ರಾಬೆರಿ ಕಟಾವು ಹಂತಕ್ಕೆ ಬಂದಿದೆ. ಈ ಮೂಲಕ ತೋಟಗಾರಿಕೆ ಕ್ಷೇತ್ರಕ್ಕೆ ಹೊಸ ಫ್ರೂಟ್ಸ್ ಬೆಳೆಯಲು ಪ್ರೇರಣೆ ನೀಡಿದೆ. ಮಹಿಳಾ ವಿವಿಯ ಸಸ್ಯಶಾಸ್ತ್ರ ಜೈವಿಕ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರ ಸಂಶೋಧನೆಗಾಗಿ ಸ್ಟ್ರಾಬೆರಿ ಸಸಿಗಳನ್ನು ಮಹಾಬಲೇಶ್ವರದಿಂದ ತಂದು ಅದನ್ನು ಬೆಳೆದು ಯಶಸ್ವಿಯಾಗಿದ್ದಾರೆ.
ಶರಣರ ನಾಡಲ್ಲಿ ಸ್ಟ್ರಾಬೆರಿ ಬೆಳೆ: ಇದು ಮಹಿಳಾ ವಿವಿ ವಿದ್ಯಾರ್ಥಿನಿಯರ ಸಾಧನೆ - ಸ್ಟ್ರಾಬೆರಿ ಬೆಳೆ
ವಿಜಯಪುರ ಜಿಲ್ಲೆಯಲ್ಲಿಯೂ ತಂಪು ಪ್ರದೇಶದಲ್ಲಿ ಬೆಳೆಯುವ ಸ್ಟ್ರಾಬೆರಿ ಬೆಳೆದು ಅದರಲ್ಲಿ ಲಾಭ ಗಳಿಸಬಹುದು ಎನ್ನುವುದನ್ನು ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ತೋರಿಸಿಕೊಟ್ಟಿದೆ. ಮನಸ್ಸಿದ್ದರೆ ಮಾರ್ಗ ಎಂಬುದನ್ನು ಅರಿತ ವಿವಿಯ ವಿದ್ಯಾರ್ಥಿನಿಯರು, ಮಹಾಬಲೇಶ್ವರದಲ್ಲಿ ಬೆಳೆಯುವ ಸ್ಟ್ರಾಬೆರಿ ಬೆಳೆದು ಇತರ ರೈತರಿಗೆ ಪ್ರೇರಣೆಯಾಗಿದ್ದಾರೆ.
ರೂಸಾ ಅನುದಾನದಲ್ಲಿ ಎರಡು ಪಾಲಿಹೌಸ್ನಲ್ಲಿ 1800 ಸ್ಟ್ರಾಬೆರಿ ಸಸಿಗಳನ್ನು ಬೆಳೆದಿದ್ದಾರೆ. ಮುಖ್ಯವಾಗಿ ಇದರಿಂದ ಐಸ್ ಕ್ರಿಮ್, ಜ್ಯೂಸ್, ಸಾಸರ್ಗಳನ್ನು ತಯಾರಿಸಲಾಗುತ್ತದೆ. ಸದ್ಯ ವಿಜಯಪುರದಲ್ಲಿ 500-600 ರೂಪಾಯಿಗೆ ಒಂದು ಕೆಜಿ ಸ್ಟ್ರಾಬೆರಿ ದೊರೆಯುತ್ತಿದೆ. ಈ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆದರೆ ಕಡಿಮೆ ದರದಲ್ಲಿ ಹೆಚ್ಚು ಲಾಭ ಗಳಿಸಬಹುದಾಗಿದೆ. 1 ಎಕರೆಗೆ 1-2 ಟನ್ ಇಳುವರಿ ಪಡೆಯಬಹುದಾಗಿದೆ. ಸ್ಟ್ರಾಬೆರಿ ಕೃಷಿಗೆ ಕೆಂಪು ಮಣ್ಣು ಅಗತ್ಯವಿದೆ. ಹೀಗಾಗಿ ಮಣ್ಣನನ್ನು ಹೊರಗಡೆಯಿಂದ ತರಲಾಗುತ್ತಿದೆ. ಸ್ಟ್ರಾಬೆರಿ ಬಿಸಿಲಿಗೆ ಹೊಂದಾಣಿಕೆಯಾಗುವುದಿಲ್ಲ. ಹೀಗಾಗಿ ಕೃತಕ ಹವಾ ನಿಯಂತ್ರಣದ ಮೂಲಕ 29-30 ಡಿಗ್ರಿ ಸೆಲ್ಸಿಯಸ್ ಉಷ್ಟಾಂಶದಲ್ಲಿ ಇದನ್ನು ಬೆಳೆಯಲಾಗುತ್ತಿದೆ.
ಪಾಲಿ ಹೌಸ್ನಲ್ಲಿ ಬೆಳೆಯುವ ಮಾದರಿಯನ್ನು ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರಿಗೆ ಪ್ರಾಕ್ಟಿಕಲ್ ಅಧ್ಯಯನ ನಡೆಸಲು ಬಳಕೆ ಮಾಡಲಾಗುತ್ತಿದೆ. ಇದರಿಂದ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರು ಸ್ಟ್ರಾಬೆರಿ ಬೆಳೆಯ ಬಗ್ಗೆ ಪ್ರಾತ್ಯಕ್ಷಿಕೆ ಅರಿತುಕೊಂಡು ಅದನ್ನು ಯುವ ರೈತರಿಗೆ ಬೆಳೆಯಲು ಪ್ರೋತ್ಸಾಹ ನೀಡಲು ಮುಂದಾಗಿದ್ದಾರೆ. ಮಾರ್ಚ್ 6ರಂದು ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆ ಜಿಲ್ಲೆಯ ಕೃಷಿ ಆಸಕ್ತ ಮಹಿಳೆಯರಿಗೆ ಸ್ಟ್ರಾಬೆರಿ ಕೃಷಿ ಬಗ್ಗೆ ತರಬೇತಿ ನೀಡುವ ಉದ್ದೇಶವಿದೆ. ಆಸಕ್ತ ರೈತ ಮಹಿಳೆಯರು ಮಹಿಳಾ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಸಂಪರ್ಕಿಸಿ ಬಿಸಿಲ ನಾಡಿನಲ್ಲಿ ತಂಪು ಹವಾಮಾನದ ಸ್ಟ್ರಾಬೆರಿ ಬೆಳೆದು ಆರ್ಥಿಕ ಮಟ್ಟವನ್ನು ಸುಧಾರಿಸಕೊಳ್ಳಬಹುದಾಗಿದೆ.