ವಿಜಯಪುರ:ಮಹಾನ್ ಸಂತ ಇಂಚಗೇರಿ ಮಠದ ಮಾಧವಾನಂದ ಸ್ವಾಮೀಜಿ ಅವರ 104ನೇ ಜನ್ಮದಿನವನ್ನು ಸಾವಿರಾರು ಅನುಯಾಯಿಗಳ ಸಮ್ಮುಖದಲ್ಲಿ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಮಠದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಇಂಚಗೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಾಧವಾನಂದ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಮಠದ ಪೀಠಾಧಿಕಾರಿ ರೇವಣಸಿದ್ಧೇಶ್ವರ ಮಹಾರಾಜರ ಮಾರ್ಗದರ್ಶನದಂತೆ ನಡೆದ ಉತ್ಸವದಲ್ಲಿ 101 ಮುತ್ತೈದೆ ಮಹಿಳೆಯರು ಕುಂಭ ಹೊತ್ತು ಪಾಲ್ಗೊಂಡರು.
ಮಾಧವಾನಂದ ಸ್ವಾಮೀಜಿ ಜನ್ಮದಿನ ಆಚರಣೆ ಕುದುರೆ ಕುಣಿತ, ಕರಡಿ ಮಜಲು, ಜಾಂಜ್ ಪತಾಕ್ ಸೇರಿದಂತೆ ಹಲವು ಕಲಾ ತಂಡಗಳು ನೋಡುಗರ ಗಮನ ಸೆಳೆದವು. ಮಾಧವಾನಂದ ಸ್ವಾಮೀಜಿಓರ್ವ ಮಠಾಧೀಶರಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಸಾವಿರಾರು ಭಕ್ತರ ಜೊತೆ ಬ್ರಿಟಿಷರೊಂದಿಗೆ ಹೋರಾಡಿದ್ದರು. ಅಥಣಿ ತಾಲೂಕಿನ ಕೊಟ್ಟಲಗಿ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ಬಂದೂಕು ಕಾರ್ಖಾನೆ ತೆರೆದು ಮದ್ದು-ಗುಂಡು ತಯಾರಿಸಿ ಸಮರದಲ್ಲಿ ಕಾದಾಡಿದ್ದರು. ಹಲವು ಬಾರಿ ಜೈಲುವಾಸವನ್ನೂ ಅನುಭವಿಸಿದ್ದರು.
ಮಾಧವಾನಂದರ ಸ್ವಾತಂತ್ರ್ಯ ಹೋರಾಟದ ಕುರಿತು ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಕ್ರಾಂತಿಯೋಗಿ ಮಹಾದೇವರು ಎಂಬ ಸಿನಿಮಾ ಕೂಡ ನಿರ್ಮಿಸಿದ್ದರು.