ವಿಜಯಪುರ: ಯುದ್ಧಪೀಡಿತ ಉಕ್ರೇನ್ನಿಂದ ವೈದ್ಯಕೀಯ ವಿದ್ಯಾಭ್ಯಾಸ ಮೊಟಕುಗೊಳಿಸಿ ದೇಶಕ್ಕೆ ಆಗಮಿಸಿರುವ ವಿದ್ಯಾರ್ಥಿಗಳ ನೆರವಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಮುಂದಾಗಿದೆ. ಸರ್ಕಾರದ ಮುಂದಿನ ಆದೇಶದವರೆಗೆ ಈ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸುವ ಮೂಲಕ ಅತಂತ್ರದಲ್ಲಿದ್ದ ವಿದ್ಯಾರ್ಥಿಗಳ ಪಾಲಿಗೆ ಸಹಾಯಹಸ್ತ ಚಾಚಿದೆ.
ಈ ಕುರಿತು ವಿಜಯಪುರದಲ್ಲಿ ಮಾತನಾಡಿದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಎಂ.ಬಿ.ಪಾಟೀಲ, ಉಕ್ರೇನ್ನಿಂದ ಆಗಮಿಸಿದ 17 ಜನ ವೈದ್ಯ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣದ ಕುರಿತು ತಮ್ಮ ಪಾಲಕರೊಂದಿಗೆ ನನ್ನನ್ನು ಭೇಟಿ ಮಾಡಿ ನೆರವು ಕೋರಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ವಿದ್ಯಾರ್ಥಿಗಳಿಗೆ ನೆರವು ಒದಗಿಸುವುದಾಗಿ ಹೇಳಿದ್ದರೂ ಇದುವರೆಗೆ ಸ್ಪಷ್ಟ ನೀತಿ ಜಾರಿಯಾಗಿಲ್ಲ ಎಂದರು.