ವಿಜಯಪುರ: ಚಿಂತಕ ಚಕ್ರವರ್ತಿ ಸೂಲಿಬೆಲೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ವಾರ್ನಿಂಗ್ ನೀಡಿದ್ದಾರೆ. ವಿಜಯಪುರ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವನ್ನು ಹಿಟ್ಲರ್ ಸರ್ಕಾರಕ್ಕೆ ಹೋಲಿಸಿದ್ದ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಹಿಂದೆ ನಾಲ್ಕು ವರ್ಷ ಸೂಲಿಬೆಲೆ ಏನ್ ಮಾಡಿದ್ದಾರೆ. ನಾಲ್ಕು ವರ್ಷ ಅನಾಹುತ ಮಾಡಿದ್ದಾರೆ. ಅವರು ಮಾಡಿದ ಅನಾಹುತಗಳನ್ನು ನಾವು ಸರಿಪಡಿಸುತ್ತಿದ್ದೇವೆ ಎಂದರು.
ಅಲ್ಲದೇ, ಪಠ್ಯಪುಸ್ತಕ, ಹಿಜಾಬ್, ಹಲಾಲ್, ಆಜಾನ್ ಅಂತ ಹೇಳಿ ನಾಟಕ ಮಾಡಿದ್ದಾರೆ. ಇನ್ಮುಂದೆ ಇಂಥ ನಾಟಕ ಮಾಡಿದ್ರೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆಗೆ ಎಚ್ಚರಿಕೆ ಕೊಟ್ಟಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ರೈತರಿಗೆ ಅನಕೂಲವಾಗುವಂತೆ ಮಾರ್ಪಾಡು ಮಾಡುವ ಬಗ್ಗೆ ಪಶುಸಂಗೋಪನಾ ಇಲಾಖೆ ಸಚಿವ ವೆಂಕಟೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಸೂಕ್ಷ್ಮ ವಿಚಾರ. ಇದನ್ನು ನಮ್ಮ ಪಕ್ಷ ಹಾಗೂ ವರಿಷ್ಠರು ನಿರ್ಧಾರ ಮಾಡುತ್ತಾರೆ. ನಾನು ವೈಯುಕ್ತಿಕವಾಗಿ ಹೇಳಿಕೆ ನೀಡಲ್ಲ ಎಂದರು.
ಸಚಿವರಾಗಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಎಂ.ಬಿ ಪಾಟೀಲ್ಗೆ ಅದ್ಧೂರಿ ಸ್ವಾಗತ:ಸಚಿವರಾದ ಬಳಿಕ ಮೊದಲ ಬಾರಿಗೆ ಶನಿವಾರ ತವರು ಜಿಲ್ಲೆ ವಿಜಯಪುರಕ್ಕೆ ಆಗಮಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರಿಗೆ ವಿಜಯಪುರ ನಗರದಲ್ಲಿ ಭರ್ಜರಿ ಸ್ವಾಗತ ನೀಡಲಾಯಿತು. ನಗರದ ಗುರುಪಾದೇಶ್ವರ ನಗರದಲ್ಲಿರುವ ತೋಂಟದಾರ್ಯ ಶಾಖಾ ಮಠಕ್ಕೆ ಭೇಟಿ ನೀಡಿದ ಅವರು, ಗದಗ-ಡಂಬಳ-ಯಡಿಯೂರು ಮಠದ ಜಗದ್ಗುರುಗಳಾದ ಡಾ. ಸಿದ್ದರಾಮ ಮಹಾಸ್ವಾಮಿಗಳು ಮತ್ತು ವಿಜಯಪುರ ಷಣ್ಮುಖಾರೂಡ ಮಠದ ಶ್ರೀ ಅಭಿನವ ಸಿದ್ದಾರೂಢ ಮಹಾಸ್ವಾಮಿಜಿ ಅವರನ್ನು ಗೌರವಿಸಿ ಆಶೀರ್ವಾದ ಪಡೆದರು.
ಬಳಿಕ ನಗರದ ಶಿವಾಜಿ ಚೌಕ್ಗೆ ಆಗಮಿಸಿದ ಸಚಿವ ಎಂ. ಬಿ. ಪಾಟೀಲ್ ಅವರನ್ನು ಅಲಂಕೃತ ತೆರದ ವಾಹನದಲ್ಲಿ ರೋಡ್ ಶೋ ಮೂಲಕ ಗಾಂಧಿಚೌಕ್ ಮಾರ್ಗವಾಗಿ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ಕರೆ ತರಲಾಯಿತು. ಈ ವೇಳೆ ಹಿತೈಷಿಗಳು, ಅಭಿಮಾನಿಗಳು, ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಕೈಮುಗಿದು ಧನ್ಯವಾದ ಸಲ್ಲಿಸಿದರು. ಮೆರವಣಿಗೆ ಮಾರ್ಗದುದ್ದಕ್ಕೂ ಸಚಿವರನ್ನು ಸ್ವಾಗತಿಸಲು ಅಳವಡಿಸಲಾಗಿದ್ದ ಸ್ವಾಗತ ಕಮಾನುಗಳು, ಫ್ಲೆಕ್ಸಗಳು ಗಮನ ಸೆಳೆದವು. ಡಿ.ಜೆ, ಲೇಸರ್ ಲೈಟ್, ಡೊಳ್ಳು ಕುಣಿತ, ಕರಡಿ ಮಜಲು ಸೇರಿದಂತೆ ನಾನಾ ಸಂಗೀತ ವಾದ್ಯಮೇಳಗಳು, ಜನಪದ ಕಲಾ ಗೊಂಬೆಗಳು ಪಾಲ್ಗೊಂಡು ನೂತನ ಸಚಿವರಿಗೆ ಅದ್ದೂರಿ ಸ್ವಾಗತ ಕೋರಿದವು.