ವಿಜಯಪುರ: ಜಿಲ್ಲೆಯಲ್ಲಿ ಪ್ರಸಕ್ತ ಮಳೆಗಾಲದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಇದರಿಂದ ಮಾನವ ಹಾನಿ ಸೇರಿದಂತೆ ಆಸ್ತಿ-ಪಾಸ್ತಿ, ಕೃಷಿ ಬೆಳೆ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ 12 ತಾಲೂಕು ನೆರೆಪೀಡಿತ ಘೋಷಣೆಗೆ ಪ್ರಸ್ತಾವನೆ
ವಿಜಯಪುರ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ನದಿ ಪಾತ್ರದ ಬಬಲೇಶ್ವರ, ನಿಡಗುಂದಿ, ಮುದ್ದೇಬಿಹಾಳ, ಕೊಲ್ಹಾರ ತಾಲೂಕಿನಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಹೀಗಾಗಿ ಜಿಲ್ಲೆಯ 12 ತಾಲೂಕುಗಳನ್ನು ನೆರೆಪೀಡಿತ ಎಂದು ಘೋಷಿಸಬೇಕೆಂದು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ. ಪಂಚನದಿಗಳ ಬೀಡು ಎಂದು ಬಣ್ಣಿಸುತ್ತಿದ್ದ ಕಾಲವೊಂದಿತ್ತು. ಕೆಲ ವರ್ಷಗಳ ಹಿಂದೆ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಬರದ ನಾಡು ಎಂಬ ಕುಖ್ಯಾತಿಗೆ ಜಿಲ್ಲೆ ಒಳಗಾಗಿದೆ. ಆದರೆ ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ರಾಜ್ಯ ಸರ್ಕಾರ ನಾಲ್ಕು ತಾಲೂಕುಗಳನ್ನು ನೆರೆಪೀಡಿತ ಎಂದು ಘೋಷಿಸಿ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಯೋಜನೆಯಲ್ಲಿ ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಿದೆ.
ಆದರೆ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 102ರಷ್ಟು ಹೆಚ್ಚುವರಿ ಮಳೆಯಾಗಿದ್ದರಿಂದ ಸಾಕಷ್ಟು ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 1450 ಮನೆಗಳು ಹಾನಿಗೊಳಗಾಗಿವೆ. 80 ಕಿ.ಮೀಟರ್ನಷ್ಟು ರಾಜ್ಯ ಹೆದ್ದಾರಿ ಹಾಳಾಗಿದೆ. ಇದರ ಅಂದಾಜು ನಷ್ಟ 12.89 ಕೋಟಿಯಷ್ಟು ಇದೆ. 10 ಸರ್ಕಾರಿ ಆಸ್ತಿ ಸಹ ಹಾನಿಯಾಗಿದ್ದು, 50 ಲಕ್ಷ ರೂ.ಅಂದಾಜಿಸಲಾಗಿದೆ. ಮಳೆಯಿಂದ ಓರ್ವ ಬಾಲಕಿ ಮೃತಪಟ್ಟು, 450 ಜಾನುವಾರುಗಳು ಅಸುನೀಗಿವೆ.