ವಿಜಯಪುರ: ದಿನನಿತ್ಯದ ಉಪಜೀವನಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲದಂತೆ ಸುಖಿಯಾಗಿ ಜೀವನ ನಡೆಸುತ್ತಿರುವ ಚಿಕ್ಕ ಹಾಗೂ ಚೊಕ್ಕ ಕುಟುಂಬ. ಅಷ್ಟೇನು ಶ್ರೀಮಂತಿಕೆ ಇಲ್ಲದಿದ್ರೂ, ಇದ್ದುದರಲ್ಲಿಯೇ ಸಂತೋಷಪಟ್ಟು ಜೀವನ ಸಾಗಿಸುತ್ತಿರುವ ಕುಟುಂಬವದು. ಇಂತಹ ಕುಟುಂಬಕ್ಕೆ ಧಿಡೀರ್ ಎದುರಾಗಿತ್ತು ಒಂದು ಸಮಸ್ಯೆ. ಆ ಸಮಸ್ಯೆಯೇ ಅವರನ್ನು ಇನ್ನಿಲ್ಲದಂತೆ ಕಾಡಿತ್ತು. ಬರೆ ಎಳೆದಂತೆ ಆ ಮಗುವಿಗೆ ಎದುರಾಗಿದ್ದ ಕಾಯಿಲೆ ಇಡೀ ಕುಟುಂಬಕ್ಕೆ ಬರಸಿಡಿಲಿನಂತೆ ಎರಗಿತ್ತು.
ಇಂತಹ ಸಂದಿಗ್ದ ಸಮಯದಲ್ಲಿ ಆ ಕುಟುಂಬಕ್ಕೆ ಬೆಳಕಾಗಿ ಬಂದವರೇ ಆ ಮನೆಯ ಮಹಾಲಕ್ಷ್ಮಿ ತಾಯಿ. ವಿಜಯಪುರ ಜಿಲ್ಲೆಯ ತಾಂಬಾದಲ್ಲಿರುವ ಕುಟುಂಬದಲ್ಲಿ ನಡೆದ ಅಪರೂಪದ ಘಟನೆಯಿದು. 16 ವರ್ಷಗಳ ಹಿಂದೆ ಮದುವೆಯಾದ ದಂಪತಿ, ತಮಗೆ ಮಕ್ಕಳಾಗುತ್ತಿಲ್ಲ ಎಂದು ನಾನಾ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು, ಕೊನೆಗೆ 2008ರಲ್ಲಿ ತಮ್ಮ ಪ್ರೀತಿಯ ಮಗಳು ರಶ್ಮಿ (ಹೆಸರು ಬದಲಾಯಿಸಲಾಗಿದೆ) ಜನಿಸಿದಳು.
ಮಗಳು ಶಾಲೆಯಲ್ಲಿ ಯಾವಾಗಲೂ ಮುಂದೆ ಇರುವುದನ್ನು ಕಂಡು ಅಪ್ಪ ಅಮ್ಮನಿಗೆ ಎಲ್ಲಿಲ್ಲದ ಖುಷಿ. ಇಂತಿಷ್ಟು ಖುಷಿಯಾಗಿದ್ದ ಈ ಕುಟುಂಬಕ್ಕೆ ಒಂದು ದಿನ ಆಘಾತ ಎದುರಾಗಿತ್ತು. ಖುಷಿ ಖುಷಿಯಾಗಿದ್ದ ತಮ್ಮ ಮಗಳ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿತು. ಕಣ್ಣುಗಳು ಹಳದಿ ಆಗತೊಡಗಿದವು. ಜೊತೆಗೆ ಸ್ಪಷ್ಟತೆಯಿಲ್ಲದೇ ಮಂಜಾಗತೊಡಗಿದವು. ನಗರದ ಆಸ್ಪತ್ರೆಗೆ ಅವಳನ್ನು ದಾಖಲು ಮಾಡಿ ಪರೀಕ್ಷೆ ನಡೆಸಿದಾಗ ಆ ಮಗುವಿಗೆ ಅಪರೂಪದ ಅನುವಂಶಿಕವಾಗಿ ಬರುವ " Wilsons disease" ಎಂದು ಪತ್ತೆ ಹಚ್ಚಿದರು. ಇದರಿಂದ ಈ ಬಾಲಕಿಯ ಲಿವರ್ ಪೂರ್ತಿಯಾಗಿ ಹಾನಿಯಾಗಿತ್ತು.
ಈ ಪ್ರಕರಣ ನಗರದ ಖ್ಯಾತ ವೈದ್ಯರಾದ ಲಿವರ್ ಸ್ಪೆಷಲಿಸ್ಟ್ ಹಾಗೂ ಲಿವರ್ ಕಸಿಯ ತಜ್ಞ ಡಾ. ರವೀಂದ್ರ ನೀಡೋಣಿ ಅವರ ಹತ್ತಿರ ಮಗಳನ್ನು ಪರೀಕ್ಷೆಗೆ ಕರೆದೊಯ್ಯುತ್ತಾರೆ. ಇವಳನ್ನು ಸಂಪೂರ್ಣವಾಗಿ ಪರೀಕ್ಷಿಸಿದ ವೈದ್ಯರು, ಬಾಲಕಿಗೆ ಲಿವರ್ ಬದಲಾಯಿಸಬೇಕು ಎಂದಾಗ ತಂದೆ- ತಾಯಿಗೆ ನೆಲವೇ ಕುಸಿದಂತಾಗಿದೆ.
ಆಗ ಇವರಿಗೆ ಧೈರ್ಯ ತುಂಬಿದ ವೈದ್ಯ ಡಾ. ರವೀಂದ್ರ ನೀಡೋಣಿ, ನಿಮ್ಮ ಮಗಳ ಜವಾಬ್ದಾರಿ ನನ್ನದು. ನೀವು ಧೈರ್ಯವಾಗಿ ಮಗಳನ್ನು ಕರೆದು ಕೊಂಡು ಬೆಂಗಳೂರಿಗೆ ಬಂದುಬಿಡಿ ಅಂತ ಹೇಳಿದ್ದಾರೆ.
ಲಿವರ್ ದಾನದ ಸಮಸ್ಯೆ : ಮಗಳನ್ನು ಬೆಂಗಳೂರಿಗೆ ಕರೆದು ಕೊಂಡು ಹೋಗಿ ಡಾ. ರವೀಂದ್ರ ಅವರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಗ ಎದುರಾಗಿದ್ದು ಲಿವರ್ ದಾನ ಮಾಡುವ ಸಮಸ್ಯೆ. ವೈದ್ಯರು ಮಗುವಿಗೆ ಯಾರು ಲಿವರ್ ದಾನ ಮಾಡುತ್ತೀರಿ? ಎಂದಾಗ ಪೋಷಕರಿಗೆ ದಿಕ್ಕೆ ತೋಚದಂತಾಗಿದೆ.