ಮುದ್ದೇಬಿಹಾಳ: ತಾಲೂಕಿನ ರಕ್ಕಸಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 2019-20 ನೇ ಸಾಲಿನ ತೊಗರಿ ತುಂಬುವ ವೇಳೆ ಹಮಾಲರಿಗೆ ( ಕೂಲಿ ಕೆಲಸಗಾರರಿಗೆ) ಕೊಡಬೇಕಾದ ಹಣಕ್ಕಿಂತ ಹೆಚ್ಚಿನ ಹಣ ಪಾವತಿಸಿದ್ದು, ಅದನ್ನು ವಾಪಸ್ ಕೊಡಿಸುವಂತೆ ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಿದ್ಧಣ್ಣ ತುರುಡಗಿ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಪೊಲೀಸ್‌ರಿಗೆ ಬರೆದಿರುವ ಪತ್ರದಲ್ಲಿ, ನಮ್ಮ ಸಂಘದ ಮುಖಾಂತರ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ ನಿಯಮಿತ ವಿಜಯಪುರ ಇವರ ಆದೇಶದಂತೆ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಿ ಖರೀದಿ ಪ್ರಕ್ರಿಯೆ ನಡೆಸಲಾಗಿದೆ. ಸರ್ಕಾರದಿಂದ 100 ಕೆ.ಜಿ ಗೆ 25 ರೂಪಾಯಿಗಳಂತೆ ಹಣ ಬಿಡುಗಡೆ ಆಗುತ್ತದೆ ಎಂದು ನಮ್ಮ ಸಂಘದಿಂದ 100 ಕೆ.ಜಿಗೆ 25 ರಂತೆ 2,913 ಕೆ.ಜಿ ತೊಗರಿ ಖರೀದಿಸಿ, ಅದನ್ನು ಕೂಲಿ ಕೆಲಸಗಾರರ ಮೂಲಕ ತುಂಬಿಸಲಾಗಿದೆ. ಒಟ್ಟು 72,825 ರೂಪಾಯಿಗಳನ್ನು ಮುತ್ತಪ್ಪ ಮಡಿವಾಳ ಇವರ ರುಜುವಾತಿನೊಂದಿಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.