ನಷ್ಟ ಅನುಭವಿಸುತ್ತಿರುವ ಲಿಂಬೆ ಬೆಳೆಗಾರರು ವಿಜಯಪುರ: ಕೋವಿಡ್ ವೈರಸ್ ತಡೆಗೆ ನಿಂಬೆ ರಸ ಸೂಕ್ತ ಮನೆಮದ್ದು ಎನ್ನುವ ವೈದ್ಯರ ಸಲಹೆ ಹಿನ್ನೆಲೆ ಚೀನಾದಲ್ಲಿ ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿದೆ. ಆದರೆ, ಭಾರತದಲ್ಲಿ ಮಾತ್ರ ನಿಂಬೆ ದರ ಪಾತಾಳಕ್ಕೆ ಕುಸಿದಿದ್ದು, ಅದರಲ್ಲೂ ನಿಂಬೆ ಕಣಜ ಎಂದು ಕರೆಯುವ ವಿಜಯಪುರ ಜಿಲ್ಲೆಯಲ್ಲಿ ಒಂದು ಮೂಟೆ ಕೇವಲ 300 ರಿಂದ 400 ರೂ. ಗೆ ಹರಾಜಾಗುತ್ತಿದೆ.
ಹೌದು, ಈ ಹಿಂದೆ ಜಿಲ್ಲೆಯಲ್ಲಿ 4 ರಿಂದ 5 ಸಾವಿರ ರೂ.ಗೆ ಮಾರಾಟವಾಗುತ್ತಿದ್ದ ಒಂದು ಮೂಟೆ ನಿಂಬೆಹಣ್ಣು ಇಂದು ಕೇವಲ 300 ರಿಂದ 400 ರೂ.ಗೆ ಬಂದು ತಲುಪಿದೆ. ಹೀಗಾಗಿ, ಖರೀದಿದಾರರು ಹಾಗೂ ಮಧ್ಯವರ್ತಿಗಳ ನಡುವೆ ಸಿಲುಕಿರುವ ನಿಂಬೆ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ.
ವಿವಿಧ ತೋಟಗಾರಿಕೆ ಬೆಳೆಗೆ ಹೆಸರು ವಾಸಿಯಾಗಿರುವ ವಿಜಯಪುರ ಜಿಲ್ಲೆಯಲ್ಲಿ ನಿಂಬೆ ಜತೆ ದ್ರಾಕ್ಷಿ, ದಾಳಿಂಬೆ, ಸೀತಾಫಲ ಸೇರಿದಂತೆ ಹತ್ತು ಹಲವು ಪೌಷ್ಟಿಕ ಹಣ್ಣು ಬೆಳೆಯಲಾಗುತ್ತದೆ. ಪ್ರತಿ ವರ್ಷ ಚಳಿಗಾಲದಲ್ಲಿ ನಿಂಬೆ ರೈತರ ಕೈ ಹಿಡಿಯುತ್ತಿತ್ತು. ಆದರೆ, ಈ ಬಾರಿ ಮಾತ್ರ ನಿಜವಾಗಲೂ ರೈತರಿಗೆ ಹುಳಿ ಜತೆ ಕಹಿ ಸಹ ಉಣಬಡಿಸುತ್ತಿದೆ.
ಇದನ್ನೂ ಓದಿ:ಇಂಡಿ ಲಿಂಬೆ ಹಣ್ಣಿಗೆ ಜಿಐ ಟ್ಯಾಗ್.. ಬೆಳೆಗಾರರಲ್ಲಿ ಮೂಡಿತು ಸಂತಸ..
ಈ ಸಲ ಜಿಲ್ಲೆಯಲ್ಲಿ 12,000 ಹೆಕ್ಟರ್ ಪ್ರದೇಶದಲ್ಲಿ ನಿಂಬೆ ಬೆಳೆಯಲಾಗಿದೆ. ಉತ್ತಮ ಮಳೆಯಿಂದ ಭೂಮಿ ಫಲವತ್ತಾಗಿರುವ ಕಾರಣ ಬಂಪರ್ ಬೆಳೆ ಬಂದಿದೆ. ಅಂತೂ ತಾವು ಮಾಡಿದ ಸಾಲ ತೀರಿಸಿ, ಸ್ವಲ್ಪ ಕಾಸು ಕೂಡಿಸಬೇಕು ಎಂದುಕೊಂಡಿದ್ದ ನಿಂಬೆ ಬೆಳೆಗಾರ ಲೆಕ್ಕಾಚಾರ ತಲೆಕೆಳಗಾಗಿದೆ. 1 ಸಾವಿರ ನಿಂಬೆಯ ಮೂಟೆ (ಡಾಗ್) 4 ರಿಂದ 5 ಸಾವಿರಕ್ಕೆ ಮಾರಾಟವಾಗುವ ಬದಲು 400 ರಿಂದ 500 ರೂ. ಗೆ ಹರಾಜು ಕೂಗಲಾಗುತ್ತಿದೆ. ದೂರದ ಗ್ರಾಮಗಳಿಂದ ವಾಹನದ ಮೂಲಕ ನಿಂಬೆ ಕಟಾವು ಮಾಡಿಕೊಂಡು ಬಂದು ಇಲ್ಲಿ ಮಾರಾಟ ಮಾಡಲು ನೋಡಿದ್ರೆ, ಕೂಲಿ ಹಣ ಸಹ ಸಿಗುತ್ತಿಲ್ಲ, ಖರ್ಚು ಹೆಚ್ಚಾಗುತ್ತಿದೆ ಎಂದು ರೈತರು ಬೇಸರ ಹೊರಹಾಕಿದ್ದಾರೆ.
ಈ ಹಿಂದೆ ನಿಂಬೆ ಬೆಳೆಗಾರರ ರಕ್ಷಣೆಗಾಗಿ ನಿಂಬೆ ಅಭಿವೃದ್ಧಿ ಮಂಡಳಿಯನ್ನು ಅಂದಿನ ಕಾಂಗ್ರೆಸ್ ಸರ್ಕಾರ ಸ್ಥಾಪನೆ ಮಾಡಿತ್ತು. ಅದಕ್ಕೆ ಅಧ್ಯಕ್ಷರೊಬ್ಬರು ಒಂದಿಷ್ಟು ಅನುದಾನ ನೀಡಿದ್ದು ಬಿಟ್ಟರೆ ಮತ್ತೇನೂ ಮಾಡಲಿಲ್ಲ. ಈಗ ಈ ಮಂಡಳಿ ಆಟಕ್ಕೂಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಇನ್ನು ಪ್ರತಿ ವರ್ಷ ಹಸಿ ನಿಂಬೆ ರಕ್ಷಣೆಗೆ ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪಿಸಬೇಕು ಎನ್ನುವ ಬೇಡಿಕೆ ಇದ್ದು, ಸರ್ಕಾರ ಇತ್ತ ಗಮನ ಹರಿಸಬೇಕಿದೆ.
ಇದನ್ನೂ ಓದಿ:ಲಿಂಬೆ ಬೆಳೆಗಾರನ ಬದುಕಿಗೆ 'ಹುಳಿ' ಹಿಂಡಿದ ಕೋವಿಡ್ ಲಾಕ್‌ಡೌನ್