ದಿನೇ ದಿನೆ ಪ್ರತಿಯೊಂದರ ಬೆಲೆಯೂ ಗಗನಕ್ಕೇರುತ್ತಿದೆ. ಅದರಲ್ಲೂ ಭೂಮಿಗೆ ಎಲ್ಲಿಲ್ಲದ ಬೇಡಿಕೆ ಜತೆಗೆ ಚಿನ್ನದ ಬೆಲೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಭೂಮಿ ಹೊಡೆದುಕೊಳ್ಳುವ ಕಾಯಕ ಶುರು ಮಾಡಿಕೊಂಡಿದ್ದಾರೆ. ಈ ಮೋಸದಾಟದಲ್ಲಿ ಭೂಮಿ ಕಳೆದುಕೊಳ್ಳುವವರು, ವಂಚನೆಗೊಳಪಟ್ಟವರು ಪೊಲೀಸರ ಬಳಿ ಹೋಗಬೇಕೋ ಅಥವಾ ನ್ಯಾಯಾಲಯದ ಮೊರೆ ಹೋಗಬೇಕೋ ಎನ್ನುವ ಗೊಂದಲದಲ್ಲಿದ್ದಾರೆ.
ಭೂ ಸಂಬಂಧಿತ ವ್ಯಾಜ್ಯಗಳು ನ್ಯಾಯಾಲಯದ ವ್ಯಾಪ್ತಿಗೆ ಬರಲಿದ್ದು, ವಕೀಲರ ಮೂಲಕ ಭೂಮಿ ಲಪಟಾಯಿಸಿದ ವ್ಯಕ್ತಿ ವಿರುದ್ಧ ದಾವೆ ಹೂಡಬಹುದಾಗಿದೆ. ನ್ಯಾಯಾಲಯ ವಾದಿ - ಪ್ರತಿವಾದಿಗಳ ವಾದ ಆಲಿಸಿ ಸಮಸ್ಯೆಗೆ ಪರಿಹಾರ ಒದಗಿಸುವ ತೀರ್ಪು ನೀಡುತ್ತದೆ. ಆದ್ರೆ ಹಲವೆಡೆ ಇಂತಹ ಸಿವಿಲ್ ಪ್ರಕರಣಗಳನ್ನು ಪೊಲೀಸ್ ಠಾಣೆಯೆದುರೇ ರಾಜಿ ಪಂಚಾಯಿತಿ ನಡೆಸಿ ಪೊಲೀಸರು ಸಮಸ್ಯೆ ಬಗೆಹರಿಸುವ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಇದರಿಂದ ವಿಜಯಪುರ ಕೂಡ ಹೊರತಲ್ಲ. ಆದ್ರೆ ಇದನ್ನು ನ್ಯಾಯಾಲಯ ಮಾನ್ಯತೆ ಮಾಡುವುದಿಲ್ಲ. ಭೂ ವ್ಯಾಜ್ಯ ಪ್ರಕರಣಗಳನ್ನು ಪೊಲೀಸ್ ಠಾಣೆಯಲ್ಲಿ ಇತ್ಯರ್ಥಪಡಿಕೊಳ್ಳಲು ನಾವು ಅನುವು ಮಾಡಿಕೊಡುವುದಿಲ್ಲ ಎಂದು ವಿಜಯಪುರ ಎಸ್ಪಿ ತಿಳಿಸಿದ್ದಾರೆ.