ವಿಜಯಪುರ: ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ದರ ಏರಿಕೆ ಆತಂಕದಲ್ಲಿದ್ದ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.
ವಿಜಯಪುರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಜಯಪುರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸದ್ಯಕ್ಕೆ ಬಸ್ ದರ ಏರಿಕೆ ಮಾಡುವುದಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂರು ವಿಭಾಗದಲ್ಲಿ ಕಳೆದ ವರ್ಷ ಶೇ. 12ರಷ್ಟು ಬಸ್ ದರ ಹೆಚ್ಚಳ ಮಾಡಲಾಗಿತ್ತು. ನಂತರ ಕೋವಿಡ್ನಿಂದಾಗಿ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿರುವಾಗ ಬಸ್ ದರ ಹೆಚ್ಚಳ ಮಾಡುವುದು ಸರಿಯಲ್ಲ ಎಂದು ಸರ್ಕಾರ ನಿರ್ಧರಿಸಿದೆ. ಸದ್ಯಕ್ಕೆ ಕೆಎಸ್ಆರ್ಟಿಸಿಯ ಮೂರು ವಿಭಾಗಗಳು ಆರ್ಥಿಕ ನಷ್ಟ ಅನುಭವಿಸುತ್ತಿದೆ. ಸಿಬ್ಬಂದಿ ಸಂಬಳವನ್ನು ಹಂತ ಹಂತವಾಗಿ ನೀಡಲಾಗುತ್ತಿದೆ. ಹೀಗಿರುವಾಗ ಸಾರಿಗೆ ಸಂಸ್ಥೆಗೆ ನಷ್ಟವಾದರೂ ಪರವಾಗಿಲ್ಲ, ಅದರ ಹೊರೆಯನ್ನು ಸಾರ್ವಜನಿಕರ ಮೇಲೆ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗಾಣಿಗ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡಬೇಕೆಂದು ಕಲ್ಲಿನಾಥ ಶ್ರೀಗಳು ಒತ್ತಾಯಿಸುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಲ್ಲಿನಾಥ ಶ್ರೀಗಳು ಈ ಕುರಿತು ತಮ್ಮ ಜತೆಯಾಗಲಿ, ಸರ್ಕಾರದ ಜತೆಯಾಗಲಿ ಯಾವುದೇ ಚರ್ಚೆ ನಡೆಸಿಲ್ಲ. ಶ್ರೀಗಳು ಚರ್ಚೆ ನಡೆಸಿದರೆ ಈ ಬಗ್ಗೆ ಪರಿಶೀಲಿಸಬಹುದು. ಅನಾವಶ್ಯಕವಾಗಿ ಮೀಸಲಾತಿ ಕುರಿತು ಗೊಂದಲದ ಹೇಳಿಕೆ ನೀಡಬಾರದು ಎಂದು ಮನವಿ ಮಾಡಿದರು. ಇದೇ ವೇಳೆ ಪಂಚಮಸಾಲಿ ಹಾಗೂ ಕುರುಬ ಸಮಾಜದ ಮೀಸಲಾತಿ ಕುರಿತು ಸಮಿತಿ ಆಯೋಗ ನೀಡುವ ವರದಿ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಇತ್ತೀಚೆಗಷ್ಟೇ ಬಿಎಂಟಿಸಿ ಬಸ್ ಟಿಕೆಟ್ ದರವನ್ನು ಶೇ. 18 ರಷ್ಟು ಹೆಚ್ಚಿಸುವ ಬಗ್ಗೆ ಪ್ರಸ್ತಾಪ ಬಂದಿದೆ. ಈ ಬಗ್ಗೆ ಸಿಎಂ ಅವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದಿದ್ದರು.
ಉಪ ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ:
ಸಿಂದಗಿ ಉಪ ಚುನಾವಣೆಯಲ್ಲಿ ನಾನು ಇಲ್ಲವೇ, ನನ್ನ ಪುತ್ರ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಹರಡಿರುವುದು ಶುದ್ಧ ಸುಳ್ಳು. ನನ್ನ ಪುತ್ರ ಈಗಾಗಲೇ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದಾನೆ. ನಾನು ಸಹ ಸ್ಪರ್ಧಿಸಲ್ಲ. ಸ್ಥಳೀಯ, ಯೋಗ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿ ತರುವುದು ತಮ್ಮ ಜವಾಬ್ದಾರಿ ಎಂದು ತಿಳಿಸಿದರು.