ವಿಜಯಪುರ: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಎಂಬ ಖ್ಯಾತಿ ಪಡೆದಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ.
6 ವಿಭಾಗದ ಸ್ನಾತಕೋತ್ತರ ಪದವಿ ಆರಂಭವಿದ್ದಾಗ ಒಟ್ಟು 168 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅಂದು ವಿಜಯಪುರದಲ್ಲಿ ಮಾತ್ರ ವಿವಿ ಕಾರ್ಯನಿರ್ವಹಿಸುತ್ತಿತ್ತು. ಈಗ ಮಂಡ್ಯ, ಸಿಂಧನೂರು ಹಾಗೂ ಉಡುತಡಿಯಲ್ಲಿ ಕ್ಯಾಂಪಸ್ ಆರಂಭಿಸಲಾಗಿದೆ. ಒಟ್ಟು 31 ವಿವಿಧ ಕೋರ್ಸ್ಗಳನ್ನು ಆರಂಭಿಸಲಾಗಿದೆ.
ಕಾಲ ಕಾಲಕ್ಕೆ ಅಗತ್ಯ ಸಿಬ್ಬಂದಿ ನೇಮಕಾತಿ ನಡೆದಿದೆ. ಆದರೆ ಅವರಲ್ಲಿ ಬಹುತೇಕರು ಅತಿಥಿ ಉಪನ್ಯಾಸಕರು. ಸದ್ಯ ಮಹಿಳಾ ವಿವಿಯಲ್ಲಿ ಬೋಧಕ ಸಿಬ್ಬಂದಿಯಲ್ಲಿ 11 ವಿಭಾಗಕ್ಕೆ ಒಬ್ಬರಂತೆ ಸಹಾಯಕ ಪ್ರೊಫೆಸರ್ ಹಾಗೂ ಉಳಿದ 24 ಪ್ರೊಫೆಸರ್ ಹುದ್ದೆ ಸೇರಿ 35 ಬೋಧಕ ಹಾಗೂ 188 ಬೋಧಕೇತರ ಸಿಬ್ಬಂದಿ ಬೇಡಿಕೆ ಪರಿಸ್ಥಿತಿಯ ಪ್ರಸ್ತಾವನೆಯನ್ನು ವಿವಿ ಸರ್ಕಾರಕ್ಕೆ ಕಳುಹಿಸಿದೆ.
ವಿಜಯಪುರ ಹೊರತುಪಡಿಸಿ ಮಂಡ್ಯ, ಸಿಂಧನೂರು ಹಾಗೂ ಉಡುತಡಿ ಹೊಸ ಸೆಂಟರ್ಗೆ ಬೇಕಾಗುವ ಬೋಧಕ ಸಿಬ್ಬಂದಿ ಸೇರಿ ಒಟ್ಟು 223 ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಪ್ರಸ್ತಾವನೆಯನ್ನು ವಿವಿ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಕೋವಿಡ್ ಕಾರಣ ನೀಡಿ ಪ್ರಸ್ತಾವನೆಯನ್ನು ವಾಪಸ್ ಕಳುಹಿಸಿದೆ.
ಅಕ್ಕಮಹಾದೇವಿ ಮಹಿಳಾ ವಿವಿ ಕುಲಸಚಿವೆ ಪ್ರೊ. ಆರ್.ಸುನಂದಮ್ಮ ಅಗತ್ಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯಿದ್ದರೆ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಹೊಸ ಸಂಶೋಧಗೆ ಪ್ರೋತ್ಸಾಹಿಸಬಹುದು ಎಂಬುದು ಮಹಿಳಾ ವಿವಿ ಕುಲಸಚಿವರ ಅಭಿಪ್ರಾಯ.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ರಾಜ್ಯದಲ್ಲಿ ಮಾದರಿ ವಿವಿ ಮಾಡಲು ಸಾಕಷ್ಟು ಯೋಜನೆಯನ್ನು ಆಡಳಿತ ಮಂಡಳಿ ಹಾಕಿಕೊಂಡಿದೆ. ವಿವಿ ಆವರಣದಲ್ಲಿ ಮಹಿಳಾ ಸಾಧಕಿಯರ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ಥೀಮ್ ಪಾರ್ಕ್ ನಿರ್ಮಿಸಲಾಗಿದೆ. ದೇಶದ ಮೊದಲ ಮಹಿಳಾ ವಸ್ತು ಸಂಗ್ರಹಾಲಯ ಸ್ಥಾಪನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಗುಣಮಟ್ಟದ ಶಿಕ್ಷಣ ದೊರೆತರೆ ನ್ಯಾಕ್ ಶ್ರೇಣಿಯಲ್ಲಿ ಸ್ಥಾನ ಪಡೆದು ಬರುವ ಅನುದಾನವನ್ನು ಮೂಲ ಸೌಕರ್ಯ ಹಾಗೂ ಹೊಸ ಸಂಶೋಧನೆ ನಡೆಸಲು ಬಳಸುವ ಯೋಜನೆ ವಿವಿಯದ್ದಾಗಿದೆ.