ಮುದ್ದೇಬಿಹಾಳ:ನಾಡಿನ ಜನತೆ ಅದರಲ್ಲೂ ಮುಖ್ಯವಾಗಿ ದೇಶದ ಬೆನ್ನೆಲುಬಾಗಿರುವ ರೈತರು ಕೊರೊನಾ ಸಾಂಕ್ರಾಮಿಕ ರೋಗದ ಹೊಡೆತಕ್ಕೆ ಸಿಲುಕಿ ಸಾಕಷ್ಟು ತೊಂದರೆಯಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿ ತಮ್ಮ ಗುರು ಪಟ್ಟಾಧಿಕಾರ ಮಹೋತ್ಸವ ನಡೆಸುವುದು ಸಮಂಜಸ ಹಾಗೂ ಸೂಕ್ತ ಎನ್ನಿಸುವುದಿಲ್ಲ. ಆದ್ದರಿಂದ ಕೊರೊನಾಗೆ ಲಸಿಕೆ ಸಿಕ್ಕು ಜನತೆ ನೆಮ್ಮದಿಯ ಜೀವನ ಪ್ರಾರಂಭಿಸಿದ ನಂತರವೇ ಪಟ್ಟಾಧಿಕಾರ ಮಹೋತ್ಸವ ನಡೆಸಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ದೇವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ತಮಗೆ ಗುರು ಪಟ್ಟಾಧಿಕಾರ ಮಹೋತ್ಸವ ಮಾಡಬೇಕೆಂದು ಕುಂಟೋಜಿ ಗ್ರಾಮಸ್ಥರು, ಸ್ಥಳೀಯ ಶಾಸಕರು, ಮಾಜಿ ಸಚಿವರು, ಗಣ್ಯ ರಾಜಕೀಯ ಧುರೀಣರು, ಮಠಾಧೀಶರು, ಶ್ರೀಮಠದ ಸದ್ಭಕ್ತರು ಸಂಕಲ್ಪ ಮಾಡಿದ್ದರು. ಈ ವಿಷಯ ತಿಳಿದ ಶ್ರೀಮಠದ ಪ್ರಮುಖ ಗುರುವರ್ಯರಾದ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು, ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಕೊರೊನಾ ಸಂಕಷ್ಟ ಮುಗಿದು ಸುಭಿಕ್ಷೆ ಮರಳುವವರೆಗೂ ಪಟ್ಟಾಧಿಕಾರ ಮುಂದೂಡಲು, ಜನತೆಯಲ್ಲಿ ನೆಮ್ಮದಿ ಮರುಸ್ಥಾಪಿತಗೊಂಡ ನಂತರ ವಿಜೃಂಭಣೆಯಿಂದ ನಡೆಸಲು ಸಲಹೆ ನೀಡಿದ ಹಿನ್ನೆಲೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.