ವಿಜಯಪುರ :ಹನುಮ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲೆಯ ನಿಡಗುಂದಿ ತಾಲೂಕಿನ ಸುಕ್ಷೇತ್ರ ಯಲಗೂರು ಗ್ರಾಮದ ಯಲಗೂರೇಶ್ವರನ ದರ್ಶನವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಡೆದರು. ಬಳಿಕ ಮಾತನಾಡಿದ ಅವರು, ಇಂದು ಹನುಮ ಜಯಂತಿ ಇರುವುದರಿಂದ ನಮ್ಮ ಪಕ್ಷ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಂತೆ ದೇವಸ್ಥಾನಕ್ಕೆ ತೆರಳಿ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮ ಆರಂಭಿಸಿದ್ದೇವೆ ಎಂದರು.
ಮಹಾದಾಯಿ, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಯೋಜನೆಗೆ ಸರ್ಕಾರ ನೀಡ್ತಿರೋ ಅನುದಾನ ಸಾಲುತ್ತಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಿಲ್ಲ. ಹಿಂದೆ 17 ಜನ ಜೆಡಿಎಸ್ ಸದಸ್ಯರನ್ನು ಸಂಸತ್ತಿಗೆ ಆಯ್ಕೆ ಮಾಡಿ ಕಳಿಸಿದಾಗ ದೇವೇಗೌಡರು ಪ್ರಧಾನಿಯಾಗಿದ್ರು. ಆಗ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದರು. ಮತ್ತು ಈ ಭಾಗದ ನೀರಾವರಿ ಯೋಜನೆಗೆ ದೇವೇಗೌಡರು ನೀಡಿದ ಕೊಡುಗೆ ಯಾರೂ ವರ್ಣನೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಶ್ರೀ ಯಲಗೂರೇಶ್ವರನ ದರ್ಶನ ಪಡೆದು ಜನತಾ ಜಲಧಾರೆಗೆ ಕುಮಾರಸ್ವಾಮಿ ಚಾಲನೆ ಜನತಾ ಜಲಧಾರೆ ಕಾರ್ಯಕ್ರಮ ಇಂದು ರಾಜ್ಯದ 15 ಕಡೆ ಏಕ ಕಾಲದಲ್ಲಿ ಪ್ರಾರಂಭವಾಗಲಿದೆ. 150 ಕಡೆ ಸಂಚಾರ ನಡೆಯಲಿದೆ. ಕೃಷ್ಣಾ ನದಿ ನೀರನ್ನು ತುಂಬಿ, ಕಳಸ ಪೂಜೆ ಮಾಡುತ್ತೇವೆ. ಸಂಕಲ್ಪ ಯಾತ್ರೆ ಬೆಂಗಳೂರಿಗೆ ತಲುಪಿದ ಬಳಿಕ ಯಾತ್ರೆಯ ಎಲ್ಲಾ ಕಳಸಗಳು ಒಂದು ಕಡೆ ಸೇರಲಿವೆ. ಅಂದು ಅರಮನೆ ಮೈದಾನದಲ್ಲಿ ಗಂಗಾರತಿ ನಡೆಯಲಿದೆ ಎಂದರು.
ಚುನಾವಣೆ ಕಹಳೆ :75 ವರ್ಷಗಳಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ನಾಡಿನ ಜನತೆಗೆ ದ್ರೋಹ ಬಗೆದಿದ್ದು, ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ಗೆ ಸಂಪೂರ್ಣ ಬಹುಮತ ನೀಡಿದರೆ ರಾಜ್ಯದ ಎಲ್ಲಾ ನದಿಗಳ ನೀರನ್ನು ಬಳಕೆ ಮಾಡುತ್ತೇವೆ ಎನ್ನುವ ಮೂಲಕ 2023ರ ವಿಧಾನಸಭೆ ಚುನಾವಣೆಗೆ ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ರಣಕಹಳೆ ಮೊಳಗಿಸಿದರು.
ಜಿಲ್ಲೆಯ ಆಲಮಟ್ಟಿಯ ಕೃಷ್ಣಾನದಿಯಲ್ಲಿ ಗಂಗಾಪೂಜೆ ನೇರವೇರಿಸುವ ಮೂಲಕ ಜನತಾ ಜಲಧಾರೆಗೆ ಅಧಿಕೃತ ಚಾಲನೆ ನೀಡಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಎಲ್ಲ ನದಿಗಳ ನೀರಿನ ಸದ್ಬಳಕೆಗೆ ಇಂದು ಹನುಮ ಜಯಂತಿ ದಿನ ಸಂಕಲ್ಪ ಮಾಡಿದ್ದೇನೆ. ಇದಕ್ಕಾಗಿ ಎಷ್ಟೇ ಲಕ್ಷ ಕೋಟಿ ರೂ. ಖರ್ಚಾದರೂ ಚಿಂತೆಯಿಲ್ಲ. ಐದು ವರ್ಷಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಿದರು.
ಇದೇ ವೇಳೆ ಕುಮಾರಸ್ವಾಮಿ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾಹಿತಿ ತೆಗೆದರೆ ಒಂದು ಗುಡ್ಡದಷ್ಟು ಮಾಹಿತಿ ಸಿಗುತ್ತದೆ. ಅದನ್ನು ದಾಖಲಾತಿ ಸಮೇತ ಇಡಬಹುದು. ಭ್ರಷ್ಟಾಚಾರ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಮುಖಗಳು ಇದ್ದಂತೆ ಎಂದು ದೂರಿದರು.
(ಇದನ್ನೂ ಓದಿ: ಏಪ್ರಿಲ್ 16 ರಿಂದ ಜನತಾ ಜಲಧಾರೆ ಗಂಗಾ ರಥಯಾತ್ರೆ ಆರಂಭ: 15 ಸ್ಥಳಗಳಿಂದ ಜಲಸಂಗ್ರಹ)