ವಿಜಯಪುರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣದ ಬಗ್ಗೆ ಜನರು ಆತಂಕಗೊಂಡಿದ್ದು, ಜನರಲ್ಲಿ ಭಯ ಹೋಗಲಾಡಿಸಿ ಜಾಗೃತಿ ಮೂಡಿಸಲು ಕೆಎಸ್ಆರ್ಟಿಸಿ ನೌಕರರು ಮುಂದಾಗಿದ್ದಾರೆ.
ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ಕೆಎಸ್ಆರ್ಟಿಸಿ ಸಿಬ್ಬಂದಿ - ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ಕೆಎಸ್ಆರ್ಟಿಸಿ ಸಿಬ್ಬಂದಿ
ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡುತ್ತಿದೆ. ಈ ಹಿನ್ನೆಲೆ ವಿಜಯಪುರದಲ್ಲಿ ಕೆಎಸ್ಆರ್ಟಿಸಿ ನೌಕರರು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಸಿಂದಗಿ ತಾಲೂಕಿನ ದೇವರಹಿಪ್ಪರಗಿಯ ಕೊಂಡಗೂಳಿ ಗ್ರಾಮದಲ್ಲಿ ಪೊಲೀಸರ ಜತೆ ಸೇರಿ ಕೆಎಸ್ಆರ್ಟಿಸಿ ನೌಕರರು ಸಮವಸ್ತ್ರ ಹಾಕಿಕೊಂಡು, ಕೈಯಲ್ಲಿ ಲಾಠಿ ಹಿಡಿದು ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಕೊರೊನಾದ ಪರಿಣಾಮ ಎನು?, ಅದು ಹೇಗೆ ಹರಡುತ್ತದೆ?, ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ತಿಳಿಹೇಳಿ ಜಾಗೃತಿ ಮೂಡಿಸಿದರು.
ಕೆಲವು ಕಡೆ ಮನೆಯಿಂದ ಅನಗತ್ಯವಾಗಿ ಹೊರಗೆ ಬರುವ ಜನರಿಗೆ ಲಾಠಿ ರುಚಿ ಸಹ ತೋರಿಸಿದರು. ಪೊಲೀಸರ ಅನುಮತಿ ಪಡೆದಿದ್ದ ಕೆಎಸ್ಆರ್ಟಿಸಿ ನೌಕರರು ರಜೆ ದಿನದಲ್ಲಿ ಮನೆಯಲ್ಲಿ ಕುಳಿತುಕೊಳ್ಳದೆ ಗ್ರಾಮದಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಗ್ರಾಮದಲ್ಲಿ ಕೆಎಸ್ಆರ್ಟಿಸಿ ನೌಕರರಿಗೆ ಕೆಲ ಸ್ಥಳೀಯರು ಸಾಥ್ ನೀಡಿದರು.