ವಿಜಯಪುರ :ದೇಶಾದ್ಯಂತ ಜಾರಿಯಾಗಿರುವ ಲಾಕ್‌ಡೌನ್‌ನಿಂದ ಹಾಲು ಉತ್ಪಾದನಾ, ಮಾರಾಟ ಸಂಪೂರ್ಣ ಇಳಿಮುಖವಾಗಿದೆ. ಇದರಿಂದ ರಾಜ್ಯದ ಕೆಎಂಎಫ್ ನಷ್ಟ ಅನುಭವಿಸುತ್ತಿದೆ. ಆದರೆ, ಪಕ್ಕದ ಮಹಾರಾಷ್ಟ್ರದಲ್ಲಿ ಎರಡು ಪ್ರಮುಖ ಹಾಲಿನ ಡೈರಿಗಳು ಲಾಕ್ ಆಗಿವೆ. ಆ ಭಾಗದ ಹಾಲು ಮಾರಾಟ ಮಾಡುವ ರೈತರು ಕರ್ನಾಟಕದತ್ತ ಮುಖಮಾಡಿದ್ದಾರೆ. ಇದನ್ನು ಅರಿತ ಕೆಎಂಎಫ್ ಮುಂದಿನ ದಿನಗಳಲ್ಲಿ ಹೆಚ್ಚು ಹಾಲು ಮಾರಾಟದ ಗುರಿ ಇಟ್ಟಿಕೊಂಡಿದೆ.
ಉತ್ತರಕರ್ನಾಟಕದಲ್ಲಿ ಅತಿ ಹೆಚ್ಚು ಹಾಲು ಹಾಗೂ ಅದಕ್ಕೆ ಸಂಬಂಧಿಸಿದ ಪದಾರ್ಥ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ವಿಜಯಪುರ-ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಒಟ್ಟು 436 ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಹೊಂದಿದೆ. ಇವರ ಮೂಲಕ ನಿತ್ಯ 1.76 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಇದರಲ್ಲಿ 36 ಸಾವಿರ, ಬಾಗಲಕೋಟೆ 20 ಸಾವಿರ ಹಾಗೂ ಜಮಖಂಡಿ ವಿಭಾಗದಿಂದ 1.20 ಲಕ್ಷ ಲೀಟರ್ ಸೇರಿ ಒಟ್ಟು ನಿತ್ಯ 1.76 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಆದರೆ, ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಹೋಟೆಲ್, ಬೀದಿ ಬದಿ ಚಹಾ ಅಂಗಡಿ ಮುಚ್ಚಿದ ಪರಿಣಾಮ ನಿತ್ಯ 30 ಸಾವಿರ ಲೀಟರ್ ಹಾಲು ಉಳಿಯುತ್ತಿದೆ. ಇದು ನಷ್ಡಕ್ಕೆ ಕಾರಣವಾಗಿದೆ.