ಮುದ್ದೇಬಿಹಾಳ/ವಿಜಯಪುರ: ದೇಶದ ಸ್ವಾತಂತ್ರ್ಯದ ಸಲುವಾಗಿ ಹೋರಾಡಿರುವ ಹೋರಾಟಗಾರರನ್ನು ಒಂದೇ ಜಾತಿಗೆ ಸಿಮೀತಗೊಳಿಸುವ ಪ್ರವೃತ್ತಿ ನಿಲ್ಲಬೇಕು ಎಂದು ಪುರಸಭೆ ಸದಸ್ಯೆ ಸಂಗೀತಾ ದೇವರಳ್ಳಿ ಹೇಳಿದರು.
ಕಿತ್ತೂರು ರಾಣಿ ಚೆನ್ನಮ್ಮ ಮಹಿಳೆಯರಿಗೆ ಸ್ಫೂರ್ತಿಯ ಸೆಲೆ: ಸಂಗೀತಾ ದೇವರಳ್ಳಿ - ಮುದ್ದೇಬಿಹಾಳದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ
ಸಂಗೊಳ್ಳಿ ರಾಯಣ್ಣ ಕುರುಬರಿಗೆ, ಚೆನ್ನಮ್ಮ ಲಿಂಗಾಯತರಿಗೆ,ಡಾ.ಅಂಬೇಡ್ಕರ್ ದಲಿತರಿಗೆ ಸೀಮಿತ ಎನ್ನುವ ಭಾವನೆ ಸಮಾಜದಲ್ಲಿ ದೂರವಾಗಿ ಈ ಎಲ್ಲ ಮಹನೀಯರನ್ನು ಸಾರ್ವತ್ರಿಕವಾಗಿ ಗೌರವ ಸಲ್ಲಿಸುವ ಕಾರ್ಯ ಆಗಬೇಕು ಎಂದು ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ವೇಳೆ ಪುರಸಭೆ ಸದಸ್ಯೆ ಸಂಗೀತಾ ದೇವರಳ್ಳಿ ಅಭಿಪ್ರಾಯಪಟ್ಟರು.
ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ರಾಣಿ ಚೆನ್ನಮ್ಮ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಂಗೊಳ್ಳಿ ರಾಯಣ್ಣ ಕುರುಬರಿಗೆ, ಚೆನ್ನಮ್ಮ ಲಿಂಗಾಯತರಿಗೆ, ಡಾ.ಅಂಬೇಡ್ಕರ್ ದಲಿತರಿಗೆ ಸೀಮಿತ ಎನ್ನುವ ಭಾವನೆ ಸಮಾಜದಲ್ಲಿ ದೂರವಾಗಿ ಎಲ್ಲರ ಬಗ್ಗೆ ಎಲ್ಲರೂ ಸಾರ್ವತ್ರಿಕವಾಗಿ ಗೌರವ ಸಲ್ಲಿಸುವ ಕಾರ್ಯ ಆಗಬೇಕೆಂದು ಹೇಳಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ ಮಾತನಾಡಿ, ಚೆನ್ನಮ್ಮ ಮಹಿಳೆಯರಿಗೆ ಸ್ಫೂರ್ತಿಯ ಸೆಲೆ. ಅವರ ಶೌರ್ಯ, ಸಾಹಸದ ಗುಣಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಅಮರೇಶ ಗೂಳಿ, ನಿವೃತ್ತ ಶಿಕ್ಷಕ ಎಸ್.ಬಿ. ಬಂಗಾರಿ, ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ, ಬಸವರಾಜ ಬಿರಾದಾರ, ಮುರಿಗೆಪ್ಪ ಹಡಲಗೇರಿ, ಪುರಸಭೆ ಕಂದಾಯ ಅಧಿಕಾರಿ ಎಂ.ಬಿ. ಮಾಡಗಿ ಮೊದಲಾದವರು ಇದ್ದರು.
ತಾಲೂಕು ಆಡಳಿತದಿಂದ ಆಚರಣೆ:
ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮಕ್ಕೆ ತಾ.ಪಂ. ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ಚಾಲನೆ ನೀಡಿದರು. ತಹಶೀಲ್ದಾರ್ ಜಿ.ಎಸ್.ಮಳಗಿ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಕೋವಿಡ್-19 ಹಿನ್ನೆಲೆಯಲ್ಲಿ ಸರಳವಾಗಿ ಜಯಂತಿ ಆಚರಣೆ ಮಾಡಲಾಯ್ತು.