ಮುದ್ದೇಬಿಹಾಳ: ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರಿಗೆ ತಾಲೂಕಿನ ಕವಡಿಮಟ್ಟಿ ಗ್ರಾ.ಪಂ. ಕೆಲಸ ಕೊಟ್ಟು ಹಣ ನೀಡಿ ನೆರವಾಗಿ ಮಾನವೀಯತೆ ಮೆರೆದಿದೆ.
ನೆರೆ ರಾಜ್ಯ ಗೋವಾಕ್ಕೆ ಕೆಲಸ ಅರಸಿ ಹೋಗಿದ್ದ ಕೂಲಿ ಕಾರ್ಮಿಕರು ಅನ್ನ,ನೀರು ಇಲ್ಲದೇ ಕಷ್ಟ ಅನುಭವಿಸಿ ನಗರಕ್ಕೆ ಬಂದಿದ್ದಾರೆ. ಇವರ ಕಷ್ಟ ನೋಡಿದ ಕವಡಿಮಟ್ಟಿ ಗ್ರಾ.ಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಿ ನೆರವಾಗಿದ್ದಾರೆ. ದಿನಕ್ಕೆ ಒಬ್ಬರಿಗೆ 275 ರೂ. ಕೂಲಿ ನೀಡುತ್ತಿದ್ದು, ನೀರು - ನೆರಳಿನ ವ್ಯವಸ್ಥೆ ಮಾಡಿದ್ದಾರೆ ಎಂದು ಕೂಲಿಕಾರರು ಸಂತಸ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ದೇಶದ್ಯಾಂತ 40 ದಿನಗಳ ಲಾಕ್‌ಡೌನ್ ಘೋಷಣೆ ಮಾಡಿದಾಗಿನಿಂದ ಕೆಲಸವಿಲ್ಲದೇ ಚಿಂತಿತರಾಗಿದ್ದ ಕೂಲಿಕಾರ್ಮಿಕರಿಗೆ ಏ.30 ರಿಂದಲೇ ಅಂದಾಜು 2 ಲಕ್ಷ ರೂ. ಅನುದಾನದಲ್ಲಿ ಕವಡಿಮಟ್ಟಿಯ ಸರಕಾರಿ ಗುಡ್ಡದಲ್ಲಿ ಇಂಗುಗುಂಡಿಯ ಕೆಲಸವನ್ನು 58 ಜನ ಕೂಲಿ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದಾರೆ. ಕಾರ್ಮಿಕರ ಮಧ್ಯೆ ಸಾಮಾಜಿಕ ಅಂತರ, ಅವರಿಗೆ ಕುಡಿವ ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದೆ.