ಮುದ್ದೇಬಿಹಾಳ(ವಿಜಯಪುರ) :ಪಿಎಸ್‌ಐ ಹುದ್ದೆ ನಿರ್ವಹಿಸಿ ಪಡೆದ ಮೊದಲ ಸಂಬಳದಲ್ಲಿ ಸ್ವಗ್ರಾಮದ ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಮಾಡಿ ಕೆಎಎಸ್ ಅಧಿಕಾರಿಯೊಬ್ಬರು ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ವಿಶೇಷತೆ ತೋರಿದ್ದಾರೆ.
ಆಹಾರ ಕಿಟ್ ವಿತರಿಸಿದ ಕೆಎಎಸ್ ಅಧಿಕಾರಿ ಸಂಗಣ್ಣ ಜೂಲಗುಡ್ಡ ತಾಲೂಕಿನ ಘಾಳಪೂಜಿ ಗ್ರಾಮದ ಸಂಗಣ್ಣ ಜೂಲಗುಡ್ಡ ಕೆಎಎಸ್ ಅಧಿಕಾರಿಯಾಗಿದ್ದು, ತಮ್ಮ ಹಿಂದಿನ ಪೊಲೀಸ್ ಇಲಾಖೆಯಲ್ಲಿ ಪಡೆದ ಪಿಎಸ್‌ಐ ಕರ್ತವ್ಯದ ಸಂಬಳವನ್ನು ಬಡವರಿಗೆ ಆಹಾರದ ಕಿಟ್ ವಿತರಣೆ ಮಾಡಿದ್ದಾರೆ.
ಆಹಾರ ಕಿಟ್ ವಿತರಿಸಿದ ಸಂಗಣ್ಣ ಜೂಲಗುಡ್ಡ 2019ರಲ್ಲಿ ಸುಮಾರು 6 ತಿಂಗಳ ಕಾಲ ಪೊಲೀಸ್ ಅಧಿಕಾರಿಯಾಗಿದ್ದರು. ನಂತರ ಕೆಎಎಸ್ ಪಾಸಾದ ಇವರು, ಈ ಹಿಂದೆ ಇದ್ದ ಪೊಲೀಸ್ ಅಧಿಕಾರಿ ಹುದ್ದೆ ತ್ಯಜಿಸಿ ಕೆಎಎಸ್ ಮೂಲಕ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯಾಗಿದ್ದಾರೆ. ಆರು ತಿಂಗಳವರೆಗೆ ಪೊಲೀಸ್ ಇಲಾಖೆಯ ಹುದ್ದೆ ನಿರ್ವಹಿಸಿದ್ದ ಸಂಗಣ್ಣ ಜೂಲಗುಡ್ಡ ಅವರು ಪೊಲೀಸ್ ಇಲಾಖೆ ಮೂಲಕ ಪಡೆದ ಮೊದಲ ಸಂಬಳವನ್ನು ಸ್ವಗ್ರಾಮದ ಬಡವರಿಗೆ ಆಹಾರದ ಕಿಟ್‌ಗಳನ್ನು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ವಿತರಣೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.
ಈ ಸಂದರ್ಭ ತಾಪಂ ಸದಸ್ಯ ಸುರೇಶ ಹುಗ್ಗಿ, ಗ್ರಾಮಲೆಕ್ಕಾಧಿಕಾರಿ ಗಂಗಾಧರ ಜೂಲಗುಡ್ಡ, ಚನಬಸಪ್ಪ ಹಾದಿಮನಿ, ಹೆಚ್ ಬಿ ನಾಗರಬೆಟ್ಟ, ಗುರು ಮಂಗಳೂರು, ಹೆಚ್ ಎಸ್ ಸರೂರ, ಗ್ರಾಪಂ ಸದಸ್ಯರಾದ ಬಸವರಾಜ ಸಾಸನೂರ, ಯಮನಪ್ಪ ನಾಗರಬೆಟ್ಟ, ಚಿದಾನಂದ ಲೊಟಗೇರಿ, ರಾಯನಗೌಡ ಪಾಟೀಲ, ಹುಲಗಪ್ಪ ನಾಗರಬೆಟ್ಟ ಇದ್ದರು.