ಮಹಿಳಾ ವಿವಿ ಘಟಿಕೋತ್ಸವ.. ಮೂವರು ಸಾಧಕಿಯರಿಗೆ ಗೌರವ ಡಾಕ್ಟರೇಟ್ ವಿಜಯಪುರ : ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 13 ಮತ್ತು 14ನೇ ವಾರ್ಷಿಕ ಘಟಿಕೋತ್ಸವ ಡಿ.19ರಂದು ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಕ್ಯಾಂಪಸ್‍ನಲ್ಲಿ ಆಯೋಜಿಸಲಾಗಿದೆ ಎಂದು ಕುಲಪತಿ ಪ್ರೋ.ಬಿ.ಕೆ.ತುಳಸಿಮಾಲಾ ತಿಳಿಸಿದರು.
ವಿವಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಅವರು, ನಾಳೆ ಮಧ್ಯಾಹ್ನ 12 ಗಂಟೆಗೆ ನಡೆಯುವ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಅಶ್ವತ್ಥನಾರಾಯಣ ಸಿ.ಎನ್, ನವದೆಹಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಶಾಂತಿ ಶ್ರೀ ಧೂಳಿಪುಡಿ ಪಂಡಿತ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
13 ಮತ್ತು 14 ಸಾಲಿನ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಮೂವರು ಸಾಧಕಿಯರಿಗೆ ಈ ಬಾರಿಯ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಸಮಾಜ ಸೇವಕಿ ಡಾ.ಎಸ್.ಜಿ. ಸುಶೀಲಮ್ಮ, ಗುಜರಾತಿನ ಪುನರುತ್ಥಾನ ವಿದ್ಯಾಪೀಠದ ಕುಲಪತಿ ಇಂದುಮತಿ ಕಾಟಾರೆ ಹಾಗೂ ಬೀದರಿನ ಗುರುನಾನಕ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಅವರಿಗೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಥಾವರಚಂದ್ ಗೆಹ್ಲೋಟ್ ಅವರು ಈ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ ಎಂದರು.
ಕುಲಸಚಿವ ಪ್ರೊ.ಬಿ.ಎಸ್.ನಾವಿ ಮಾತನಾಡಿ, ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಿಂದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 167 ವಿದ್ಯಾರ್ಥಿನಿಯರಿಗೆ 202 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ 81 ವಿದ್ಯಾರ್ಥಿನಿಯರು 13ನೆಯ ಮತ್ತು 37 ವಿದ್ಯಾರ್ಥಿನಿಯರು 14ನೆಯ ಘಟಿಕೋತ್ಸವದ ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಪದಕ ಪ್ರದಾನ : ಈ ಘಟಿಕೋತ್ಸವದಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೋಮಾ ಸೇರಿ ಒಟ್ಟು 23,911 ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು. ಇನ್ನೂ ಘಟಿಕೋತ್ಸವದಲ್ಲಿ ಒಟ್ಟು 55 ವಿದ್ಯಾರ್ಥಿನಿಯರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು. ಈ ಘಟಿಕೋತ್ಸವದಲ್ಲಿ ಒಟ್ಟು 2,169 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ನೀಡಲಾಗುವುದು. 13ನೆಯ ಘಟಿಕೋತ್ಸವದಲ್ಲಿ ಒಟ್ಟು 1,033 ವಿದ್ಯಾರ್ಥಿನಿಯರಿಗೆ ಸ್ನಾತಕೋತ್ತರ ಪದವಿ ನೀಡಲಾಗುವುದು. ಈ ಪೈಕಿ ಎಂ.ಎ- 342, ಎಂ.ಕಾಂ- 250, ಎಂ.ಬಿ.ಎ- 42, ಎಂ.ಎಸ್.ಸಿ- 302, ಎಂ.ಈಡಿ- 11, ಎಂ.ಪಿ.ಈಡಿ- 16, ಎಂ.ಎಲ್.ಆಯ್.ಎಸ್- 10, ಎಂ.ಎಸ್.ಡಬ್ಲ್ಯೂ 28, ಮತ್ತು ಎಂ.ಸಿ.ಎ- 16 ವಿದ್ಯಾರ್ಥಿನಿಯರು ಪದವಿಗೆ ಅರ್ಹರಾಗಿದ್ದಾರೆ ಎಂದು ತಿಳಿಸಿದರು.
5 ಕಡೆ ಕ್ಯಾಂಪಸ್ ಗಳು :ಕುಲಪತಿ ಪ್ರೋ. ಬಿ.ಕೆ. ತುಳಸಿಮಾಲಾ ಮಾತನಾಡಿ, ರಾಜ್ಯದ ವಿವಿಧಡೆಯಿಂದ ವಿದ್ಯಾರ್ಥಿನಿಯರು ವಿಜಯಪುರ ಮಹಿಳಾ ವಿವಿ ಬಂದು ಅಭ್ಯಸಿಸಲು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಐದು ಕಡೆ ಪ್ರಾದೇಶಿಕ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಈಗಾಗಲೇ ಮಂಡ್ಯ ಹೊರವಲಯ ಹಾಗೂ ಉಡತಡಿದಲ್ಲಿ ಪ್ರಾರಂಭಿಸಲಾಗಿದೆ. ಮುಂದಿನ ದಿನದಲ್ಲಿ ಬೆಂಗಳೂರಿನಲ್ಲಿ ಆರಂಭಿಸಲು ಜಾಗ ದೊರೆತಿದೆ. ಅದರ ನಂತರ ಬೀದರ, ಚಾಮರಾಜನಗರದಲ್ಲಿ ಪ್ರಾದೇಶಕ ಕೇಂದ್ರ ಆರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ :ಜಾನಪದ ವಿವಿ ಘಟಿಕೋತ್ಸವ: ಆರು ಸಾಧಕರಿಗೆ ಗೌರವ ಡಾಕ್ಟರೇಟ್