ವಿಜಯಪುರ: ಕಕ್ಷಿದಾರರಿಗೆ ಸಕಾಲಕ್ಕೆ ನ್ಯಾಯ ಮತ್ತು ಪರಿಹಾರ ಒದಗಿಸಲು ಅನುಕೂಲವಾಗುವಂತೆ ಬರುವ ಸೆ. 19 ರಂದು ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ರಾಜ್ಯಾದ್ಯಂತ ಆನ್ ಲೈನ್ ವಿಡಿಯೋ ಸಂವಾದದ ಮೂಲಕ ಇ-ಲೋಕ್ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಅರವಿಂದ ಕುಮಾರ್ ತಿಳಿಸಿದ್ದಾರೆ.
ಮೆಗಾ ಇ-ಲೋಕ್ ಅದಾಲತ್ ಆಯೋಜಿಸುವ ಕುರಿತಂತೆ ರಾಜ್ಯದ 30 ಜಿಲ್ಲೆಗಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹಿರಿಯ ಸಿವಿಲ್ ನ್ಯಾಯಾಧೀಶರುಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ದೇಶದಲ್ಲಿಯೇ ಪ್ರಥಮ ಬಾರಿಗೆ ಇ-ಲೋಕ್ ಅದಾಲತ್‍ನ್ನು ರಾಜ್ಯಾದ್ಯಂತ ಸೆ. 19 ರಂದು ಆನ್ ಲೈನ್ ವಿಡಿಯೋ ಸಂವಾದದ ಮೂಲಕ ಆಯೋಜಿಸಲಾಗುತ್ತಿದೆ. ಸರ್ವರಿಗೂ ನ್ಯಾಯ ಸಿಗುವ ಉದ್ದೇಶದೊಂದಿಗೆ ಆಯೋಜಿಸಲಾಗುತ್ತಿದ್ದು, ಕ್ರಿಮಿನಲ್ ಕಂಪೌಂಡೇಬಲ್, ಬ್ಯಾಂಕ್ ಸಂಬಂಧಿತ, ಕುಟುಂಬ ವ್ಯಾಜ್ಯ ಹಾಗೂ ವಾಹನ ಅಪಘಾತಕ್ಕೆ ಸಂಬಂಧಪಟ್ಟ ವ್ಯಾಜ್ಯಗಳ ಪರಿಹಾರಕ್ಕೆ ಇದು ನೆರವಾಗಲಿದೆ ಎಂದು ಹೇಳಿದರು.
ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಇ-ಲೋಕ್ ಅದಾಲತ್ ಸಂತ್ರಸ್ಥ ಕುಟುಂಬಗಳಿಗೆ ಹೆಚ್ಚಿನ ನೆರವಾಗಲಿದ್ದು, ನ್ಯಾಯಾಲಯಗಳಿಗೆ ಹೋಗದೆ ವಕೀಲರ ಕಚೇರಿ ಮತ್ತು ನ್ಯಾಯವಾದಿಗಳ ಮೂಲಕ ನ್ಯಾಯ ಪಡೆಯಲು ನೆರವಾಗಲಿದೆ. ಸೂಕ್ತ ದಾಖಲಾತಿಗಳೊಂದಿಗೆ ಸಂಪರ್ಕಿಸಿ ನ್ಯಾಯ ಪಡೆಯಬೇಕು. ಗ್ರಾಮಾಂತರ ಪ್ರದೇಶಗಳ ಸಂತ್ರಸ್ತರು ಫೋನ್ ಮೂಲಕ ಸಂಪರ್ಕಿಸಿ ಅಥವಾ ಲೋಕ್ ಅದಾಲತ್ ವೆಬ್‍ಸೈಟ್ ಲಿಂಕ್ ಮೂಲಕವೂ ನ್ಯಾಯ ಅಥವಾ ಪರಿಹಾರ ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.