ವಿಜಯಪುರ: ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಮುಖಂಡ ಗೋಪಾಲ ಕಾರಜೋಳ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಾಳೆ ಹೆಲಿಕಾಪ್ಟರ್ ಮೂಲಕ ವಿಜಯಪುರಕ್ಕೆ ಆಗಮಿಸಲಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಕಲಬುರಗಿ ಏರ್ಪೋರ್ಟ್ಗೆ ಆಗಮಿಸಲಿರುವ ನಡ್ಡಾ ಬೆಳಗ್ಗೆ 11-30 ಕ್ಕೆ ಹೆಲಿಕಾಪ್ಟರ್ ಮೂಲಕ ವಿಜಯಪುರ ನಗರದ ಸೈನಿಕ ಶಾಲೆಯ ಹೆಲಿಪ್ಯಾಡ್ಗೆ ಆಗಮಿಸಲಿದ್ದಾರೆ ಎಂದರು.
11-40ಕ್ಕೆ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಕಾರಣ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿ ಲಿಂಗೈಕ್ಯ ಶ್ರೀಗಳ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಲಿದ್ದಾರೆ. ನಂತರ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ ನಗರದ ವಾರ್ಡ್ ನಂಬರ್ 12ರ ಬಿಎಲ್ಡಿಇ ಇಂಜಿನಿಯರ್ ಕಾಲೇಜ್ ಬಳಿಯ ಮೈದಾನದಲ್ಲಿ ಮನೆ ಮನೆ ಭೇಟಿ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಬಳಿಕ ವಾರ್ಡ್ ನಂಬರ್ 10ರಲ್ಲಿ ಗೋಡೆ ಬರಹ ಹಾಗೂ ಫಲಾನುಭವಿಗಳ ಮನೆಗೆ ಭೇಟಿ ನೀಡಲಿದ್ದು, ನಡ್ಡಾ ಸಾಂಕೇತಿಕವಾಗಿ ಐದು ಜನ ಫಲಾನುಭವಿಗಳ ಮನೆಗೆ ಭೇಟಿ ನಂತರ 12-45 ಕ್ಕೆ ಹೆಲಿಕಾಪ್ಟರ್ ಮೂಲಕ ಸಿಂದಗಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ನಂತರ ಸಿಂದಗಿಯ ವಿಜಯಪುರ ರಸ್ತೆಯಲ್ಲಿ ಆಯೋಜನೆ ಮಾಡಿರುವ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾಗವಹಿಸಲಿದ್ದಾರೆ ಎಂದರು.
ಸಾರ್ವಜನಿಕ ಸಮಾವೇಶ: ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಅಶ್ವತ್ಥ ನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸೇರಿದಂತೆ ಜಿಲ್ಲೆಯ ಎಲ್ಲಾ ಹಾಲಿ ಹಾಗೂ ಮಾಜಿ ಶಾಸಕರು, ಪದಾಧಿಕಾರಿಗಳು ನಿಗಮ ಮಂಡಳಿ ಅಧ್ಯಕ್ಷರು ಸಾಥ್ ನೀಡಲಿದ್ದಾರೆ ಎಂದರು. ಸಾರ್ವಜನಿಕ ಸಮಾವೇಶದಲ್ಲಿ 50 ಸಾವಿರಕ್ಕೂ ಹೆಚ್ವು ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ನಾಗಠಾಣ, ಇಂಡಿ, ದೇವರ ಹಿಪ್ಪರಗಿ ಹಾಗೂ ಸಿಂದಗಿ ನಾಲ್ಕು ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದರು.