ವಿಜಯಪುರ: ನಗರ ಸಮೀಪದ ಅಲಿಯಾಬಾದ್ ತೋಟದ ಮನೆಯಲ್ಲಿ ಜೋಡಿ ಕೊಲೆ ಪ್ರಕರಣ ಮಾಸುವ ಮುನ್ನವೇ, ರೌಡಿಶೀಟರ್ ಒಬ್ಬನನ್ನು ದುರ್ಷ್ಕಮಿಗಳು ನಡುರಸ್ತೆಯಲ್ಲಿ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಕೊಲೆಗೆ ಫೈನಾನ್ಸ್ ವ್ಯವಹಾರ ಕಾರಣವಿರಬಹುದು ಎನ್ನಲಾಗಿದೆ.
ಸತೀಶ್ ರೆಡ್ಡಿ ನಾಗನೂರ (28) ಕೊಲೆಯಾದ ರೌಡಿಶೀಟರ್. ಸತೀಶ್ ನಾಗನೂರ ತನ್ನ ಸ್ನೇಹಿತರ ಜೊತೆ ಶುಕ್ರವಾರ ರಾತ್ರಿ ಪಾರ್ಟಿ ಮಾಡಲು ಡಾಬಾಗೆ ಹೋಗಿದ್ದಾನೆ. ಊಟ ಮುಗಿಸಿಕೊಂಡು ಬರುವಾಗ ಸಿದ್ಧಾರೂಢ ಆಶ್ರಮದ ಬಳಿಯ ಸೊಲ್ಲಾಪುರ ರಿಂಗ್ ರಸ್ತೆಯಲ್ಲಿ ಅಡ್ಡಗಟ್ಟಿದ ಕೆಲ ದುರ್ಷ್ಕಮಿಗಳು, ಸತೀಶ್ ಕಣ್ಣಿಗೆ ಕಾರದ ಪುಡಿ ಎರಚಿ, ಕಲ್ಲಿನಿಂದ ತಲೆ ಹಾಗೂ ಮುಖ ಜಜ್ಜಿ ಕೊಲೆ ಮಾಡಿದ್ದಾರೆ. ಕೊಲೆಯಾದ ಸತೀಶ ಜೊತೆ ಇನ್ನೂ ಕೆಲ ಸ್ನೇಹಿತರಿದ್ದು, ಘಟನೆಯ ಭೀಕರತೆ ಕಂಡು ಓಡಿ ಹೋಗಿದ್ದಾರೆ.