ವಿಜಯಪುರ:ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೊ ಅಂಟಿಸಿದ್ದು ತಪ್ಪಿಲ್ಲ. ನಮ್ಮ ಯುವ ಮೋರ್ಚಾ ಕಾರ್ಯಕರ್ತರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಭಾರತದ ಪಾರ್ಟಿಯೋ, ಪಾಕಿಸ್ತಾನದ ಪಾರ್ಟಿಯೋ ಎಂದು ಪ್ರಶ್ನಿಸಿದ್ದಾರೆ.
ಸಾವರ್ಕರ್ ಬಗ್ಗೆ ಚಿಲ್ಲರೆಯಾಗಿ ಮಾತನಾಡುವುದು ಕಾಂಗ್ರೆಸ್ ಸಂಸ್ಕೃತಿ. ಸಾವರ್ಕರ್ ಫೋಟೊವನ್ನು ಸೋನಿಯಾ ಗಾಂಧಿ, ಆ ಗಾಂಧಿ, ಈ ಗಾಂಧಿ ಮಧ್ಯೆ ಹಾಕಿದ್ದಾರಾ? ಸಾವರ್ಕರ್ ಕುಟುಂಬಸ್ಥರು ರಾಜಕೀಯದಲ್ಲಿ ಇಲ್ಲ. ಸಾವರ್ಕರ್ ಕುಟುಂಬಸ್ಥರು ಯಾವುದೇ ಪಿಂಚಣಿ ಪಡೆದುಕೊಂಡಿಲ್ಲ. ಸಾವರ್ಕರ್ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಸಾವರ್ಕರ್ ಫೋಟೊ ಅಂಟಿಸಿದ ದೇಶಪ್ರೇಮಿಗಳನ್ನು ಬಂಧಿಸಬಾರದು ಎಂದರು.
ಸಿದ್ದರಾಮಯ್ಯ ವಿರುದ್ಧ ಕಿಡಿ: ಮಾಜಿ ಸಿಎಂ ಸಿದ್ದರಾಮಯ್ಯ ಮಾಂಸದೂಟ ಸೇವಿಸಿ ದೇಗುಲಕ್ಕೆ ಹೋಗಿದ್ದಾರಾ ಎನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ, ಸಿದ್ದರಾಮಯ್ಯಗೆ ತಾಕತ್ ಇದ್ರೆ ಹಂದಿ ತಿಂದು ಮಸೀದಿಗೆ ಹೋಗಲಿ. ನಿಮ್ಮ ತಾಕತ್ ಗೊತ್ತಾಗುತ್ತೆ ಎಂದು ಯತ್ನಾಳ್ ಸವಾಲು ಹಾಕಿದರು.
ಒಂದೊಂದು ದೇಗುಲದಲ್ಲಿ ಧರ್ಮ ಪಾಲನೆ ಮಾಡುವ ಸಂಸ್ಕೃತಿ, ನಿಯಮ ಇರುತ್ತದೆ. ಕೆಲವೊಂದು ಕಡೆಗಳಲ್ಲಿ ಮಾಂಸ ಸೇವಿಸಿ ಹೋಗಬಾರದು. ಇನ್ನೂ ಕೆಲವೊಂದು ಕಡೆ ಮೈಮೇಲೆ ಬಟ್ಟೆ ಹಾಕಿಕೊಂಡು ಹೋಗಬಾರದು. ಬನಿಯನ್ ತೆಗೆದು ದೇಗುಲಕ್ಕೆ ಹೋಗುವ ಸಂಸ್ಕೃತಿ ಇದೆ. ದೇಗುಲ ಪಾವಿತ್ರ್ಯತೆ, ಒಳ್ಳೆಯದಾಗಬೇಕಾದರೆ ಅಲ್ಲಿನ ನಿಯಮ ಪಾಲಿಸೋದು ಎಲ್ಲರ ಜವಾಬ್ದಾರಿ ಆಗಿರುತ್ತೆ. ಉದ್ದಟತನ ಮಾಡುವುದರಿಂದ ದೇವರನ್ನು ನಂಬುವ ಆಸ್ತಿಕರ ಮನಸ್ಸಿಗೆ ನೋವುಂಟು ಮಾಡಿದಂತೆ ಆಗುತ್ತದೆ. ಸಿದ್ದರಾಮಯ್ಯ ಅವರೇ ಆಗಲಿ ಯಾರೇ ಆಗಲಿ ಈ ರೀತಿ ಆಸ್ತಿಕರ ಮನಸ್ಸಿಗೆ ನೋವುಂಟು ಮಾಡುವ ಕೆಲಸ ಮಾಡಬಾರದು ಎಂದು ತಿಳಿಸಿದರು.