ಕರ್ನಾಟಕ

karnataka

ETV Bharat / state

ವಾರಬಂದಿ ಮೂಲಕ ಕಾಲುವೆಗೆ ನೀರು ಹರಿಸಲು ನಿರ್ಣಯ: ಆರ್.ಬಿ.ತಿಮ್ಮಾಪುರ - ಈಟಿವಿ ಭಾರತ ಕನ್ನಡ

ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಮುಂಗಾರು ಹಂಗಾಮಿಗೆ 67 ಟಿಎಂಸಿ ನೀರು ಲಭ್ಯವಿದ್ದು, ಮುಂಗಾರು ಹಂಗಾಮಿನ ಬಿತ್ತನೆ ಕಡಿಮೆಯಾಗಿದೆ ಎಂದು ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷ ಹೇಳಿದರು.

ನೀರಾವರಿ ಸಲಹಾ ಸಮಿತಿ ಸಭೆ
ನೀರಾವರಿ ಸಲಹಾ ಸಮಿತಿ ಸಭೆ

By ETV Bharat Karnataka Team

Published : Aug 22, 2023, 6:30 AM IST

ಆರ್ ಬಿ ತಿಮ್ಮಾಪುರ ಹೇಳಿಕೆ

ವಿಜಯಪುರ:ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳ ಒಳಹರಿವು ಸ್ಥಗಿತಗೊಂಡ ನಂತರ ವಾರಬಂದಿ ಪದ್ಧತಿ ಅನುಸರಿಸಲಾಗುತ್ತದೆ ಎಂದು ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷ ಆರ್.ಬಿ.ತಿಮ್ಮಾಪುರ ಹೇಳಿದರು. ಸೋಮವಾರ ನಿಡಗುಂದಿ ತಾಲೂಕಿನ ಆಲಮಟ್ಟಿಯ ಕೆಬಿಜೆಎನ್ಎಲ್ ಎಂಡಿ ಕಚೇರಿಯ ಸಭಾ ಭವನದಲ್ಲಿ ಸಚಿವ ತಿಮ್ಮಾಪುರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.

ಸಭೆ ಬಳಿಕ ಆರ್.ಬಿ.ತಿಮ್ಮಾಪುರ ಮಾತನಾಡಿ, ಜುಲೈ 12ರಿಂದ ಡ್ಯಾಂಗೆ ಒಳಹರಿವು ಆರಂಭವಾಗಿದೆ. ಸದ್ಯ ಡ್ಯಾಂ ಭರ್ತಿಯಾಗಿದೆ. 519.60 ಮೀಟರ್ ನೀರು ಸಂಗ್ರಹವಾಗಿದೆ. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಮುಂಗಾರು ಹಂಗಾಮಿಗೆ 67 ಟಿಎಂಸಿ ನೀರು ಲಭ್ಯವಿದೆ. ಮುಂಗಾರು ಹಂಗಾಮಿನ ಬಿತ್ತನೆ ಕಡಿಮೆಯಾಗಿದೆ. ನೀರಾವರಿ ಸಲಹಾ ಸಮಿತಿ ಇಲ್ಲಿಯವರೆಗೆ ಆಗಿರದ ಕಾರಣ ಜುಲೈ 27 ರಿಂದ 120 ದಿನಗಳ ಕಾಲ ನೀರು ಬಿಡಲಾಗುತ್ತಿದೆ. ಡ್ಯಾಂಗೆ ಒಳಹರಿವು ಸ್ಥಗಿತವಾದ ಬಳಿಕ ವಾರಬಂದಿ‌ ಮೂಲಕ ನೀರು ಬಿಡಲಾಗುತ್ತಿದೆ. ಇದಕ್ಕೆ ಡಿಸಿಎಂ ಅನುಮೋದನೆ ನೀಡಿದ್ದಾರೆ ಎಂದು ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿ 6.68 ಲಕ್ಷ ಹೆಕ್ಟೇರ್ ನೀರಾವರಿಗೆ ಒಳಪಟ್ಟಿದೆ. ಒಳ‌ಹರಿವು ನಿಂತ ಮೇಲೆ 14 ದಿನ ಚಾಲೂ 10 ದಿನ ಬಂದ್ ಪದ್ದತಿಯಲ್ಲಿ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲಾಗುವುದು. ನವೆಂಬರ್​ 23ರ ವರೆಗೆ ಮುಂಗಾರು ಹಂಗಾಮಿಗೆ ನೀರು‌ ಬಿಡಲಾಗುತ್ತದೆ. ಈ ಕುರಿತು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಸಚಿವರು ಹೇಳಿದರು. ಇದೇ ವೇಳೆ, ಒಟ್ಟಾರೆ‌ ನೀರಾವರಿ ಕ್ಷೇತ್ರದ ಶೇ.80 ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ನೀಡಲಾಗುತ್ತದೆ. ರೈತರು ಲಘು ಬೆಳೆಗಳನ್ನು ಬೆಳೆಯಬೇಕು, ನೀರು ಪೋಲಾಗದಂತೆ ಮಿತವಾಗಿ ಬಳಸಬೇಕು ಎಂದರು‌. ಆಗಸ್ಟ್ 28ರಿಂದ 24 ದಿನ ಚಾಲೂ 10 ದಿನಗಳ ಬಂದ್ ಪದ್ದತಿ ಅನುಸರಿಸಲಾಗುತ್ತದೆ. ಮುಂಬರುವ ನವೆಂಬರ್​ನಲ್ಲಿ‌ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲಾಗುತ್ತದೆ ಎಂದು‌ ಮಾಹಿತಿ ನೀಡಿದರು.

ಸಭೆ ಆರಂಭಕ್ಕೂ ಮುನ್ನ, ಕೆಲ ರೈತ ಮುಖಂಡರು ಸಭಾಂಗಣದಲ್ಲಿ ಬಂದು ಕುಳಿತಿದ್ದರು. ಈ ಸಂದರ್ಭದಲ್ಲಿ ಸಭೆಯಿಂದ ರೈತ ಮುಖಂಡ ವಾಸುದೇವ ಮೇಟಿ‌ ಎಂಬವರನ್ನು ಹೊರಹೋಗುವಂತೆ ಸಚಿವರು ಸೂಚನೆ ನೀಡಿದರು. ಸಭೆಯಲ್ಲಿ ರೈತರ ಮುಖಂಡರುಗಳಿಗೆ ಅನುಮತಿ ಇಲ್ಲ. ಹೀಗಾಗಿ ಹೊರ ಹೋಗುವಂತೆ ತಿಳಿಸಲಾಯಿತು. ವಾಸುದೇವ ಮೇಟಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ‌ಹೊರಹಾಕಿದರು. ನಮಗೆ ಸಭೆಗೆ ಬರುವಂತೆ ಆಹ್ವಾನ ನೀಡಿದ್ದಾರೆ, ಬಳಿಕ ಸಭೆಯಿಂದ ಹೊರ ಹಾಕುತ್ತಾರೆ. ಹಾಗಾದರೆ‌ ರೈತರೇ‌ ಇಲ್ಲದ ಸಭೆಯಿಂದ ಉಪಯೋಗವಾದರೂ ಏನು, ರೈತರ ಸಮಸ್ಯೆಯನ್ನು ಯಾರೂ ಆಲಿಸುವರೇ ಇಲ್ಲವೇ ಎಂದು ಆಕ್ರೋಶ ಹೊರಹಾಕಿದರು.

ಇನ್ನೊಂದೆಡೆ, ಗೇಟ್ ಮುಂಭಾಗ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ:ನಾಗ್ಪುರ ಶಿಕ್ಷಣ ನೀತಿ ರದ್ದು, ಹೊಸ ಕರ್ನಾಟಕ ಶಿಕ್ಷಣ ನೀತಿ ಜಾರಿ: ಡಿಸಿಎಂ ಡಿ.ಕೆ.ಶಿವಕುಮಾರ್

ABOUT THE AUTHOR

...view details