ವಿಜಯಪುರ: ಪಿಎಸ್‌ಐ, ಶಿಕ್ಷಕರ ಅಕ್ರಮ ನೇಮಕಾತಿ ಬೆನ್ನಲ್ಲೇ ಜಿಲ್ಲೆಗೆ ಪಿಡಬ್ಲ್ಯೂಡಿ ಇಂಜನಿಯರ್ಗಳ ನೇಮಕಾತಿ ಕಳಂಕವೂ ತಟ್ಟಿದೆ. ಲೋಕೋಪಯೋಗಿ ಇಲಾಖೆಯ ಅಭಿಯಂತರರ ನೇಮಕಾತಿ ಪರೀಕ್ಷೆಯ ಅಕ್ರಮ ನೇಮಕಾತಿಯಲ್ಲಿ ಜಿಲ್ಲೆಯ ಶಿಕ್ಷಕರೊಬ್ಬರ ಕೈವಾಡವಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆ ಶಿಕ್ಷಕನನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ ಚಾಲಾಕಿ ಶಿಕ್ಷಕ ಮಾತ್ರ ಪೊಲೀಸರ ಹಾಗೂ ಸಿಐಡಿಯವರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ.
ಜಿಲ್ಲೆಯ ಸಿಂದಗಿ ತಾಲೂಕಿನ ಗುತ್ತರಗಿಯ ಸರ್ಕಾರಿ ಮಾದರಿ ಪ್ರಾಥಮಿ ಶಾಲೆ ಶಿಕ್ಷಕ ಗೊಲ್ಲಾಳಪ್ಪ ಅಮಾನತ್ತಾದ ಶಿಕ್ಷಕ. ಪ್ರಶ್ನೆ ಪತ್ರಿಕೆಯನ್ನು ಮೊಬೈಲ್ನಲ್ಲಿ ಫೋಟೋ ಹೊಡೆದುಕೊಂಡು, ಕೀ ಉತ್ತರ ಸಿದ್ಧ ಮಾಡಲು ನೆರವಾಗಿರುವ ಆರೋಪದ ಮೇಲೆ ಇವರ ವಿರುದ್ಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಅಮಾನತು ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.
ಗುತ್ತರಗಿ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರು, ಕೆ.ಪಿ.ಎಸ್.ಸಿ ಆಯೋಗದ ಪಿಡಬ್ಲೂಡಿ ಇಲಾಖೆಯ ಅಸಿಸ್ಟಂಟ್ ಇಂಜಿನಿಯರಿಂಗ್ ಹುದ್ದೆಯ ಪರೀಕ್ಷೆಯಲ್ಲಿ, ಪರೀಕ್ಷಾ ಕೇಂದ್ರವಾದ ಕಲಬುರ್ಗಿಯ ಬಾಲಾಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆಯ ಸೋರಿಕೆಗೆ ಕಾರಣವಾಗಿದ್ದರು. ಹೀಗಾಗಿ ಇವರ ಮೇಲೆ ಮೋಸ, ವಂಚನೆಯ ಹಾಗೂ ಇದಕ್ಕೆ ಸಂಬಂಧಿಸಿದ ಪ್ರಕರಣಗಳು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಶಿಕ್ಷಕನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದು, ಆದರೆ ಶಿಕ್ಷಕ ಮಾತ್ರ ಚಳ್ಳೆ ಹಣ್ಣು ತಿನ್ನಿಸಿ ಓಡಾಡ್ತಿದ್ದಾನೆ.
ಶಿಕ್ಷಕನ ಹಿಂದೆ ಪ್ರಭಾವಿ ಕೈ :ಶಿಕ್ಷಕನ ಹಿಂದೆ ಪ್ರಭಾವಿಗಳ ಕೈಯಿದೆ ಎನ್ನಲಾಗಿದೆ. ಈ ಶಿಕ್ಷಕನ ಮೇಲೆ ಕೇವಲ ಲೋಕೋಪಯೋಗಿ ಇಲಾಖೆ ಅಲ್ಲದೇ, ವಿವಿಧ ಇಲಾಖೆಗಳಿಗೆ ನೇರವಾಗಿ ಅಥವಾ ಕೆಪಿಎಸ್ಸಿ ಮೂಲಕ ನಡೆಯುವ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅಕ್ರಮವಾಗಿ ನೇಮಕ ಮಾಡಿದ ಆರೋಪವೂ ಇದೆ. ಅಲ್ಲದೆ 10ಕ್ಕೂ ಹೆಚ್ಚು ಪಿಎಸ್ಐಗಳನ್ನು ಅಕ್ರಮವಾಗಿ ನೇಮಕ ಮಾಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇಷ್ಟಿದ್ದರೂ ಕೂಡಾ ಆತ ಪೊಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿರುವುದರಿಂದ ಆತನ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಮೂರ್ನಾಲ್ಕು ಬಾರಿ ಅರೆಸ್ಟ್ ಮಾಡಲು ಬಂದಾಗಲೊಮ್ಮೆ ಪೊಲೀಸರ ಕಣ್ಣು ತಪ್ಪಿಸಿ ಓಡಾಡಿಕೊಂಡಿದ್ದಾನೆ.