ವಿಜಯಪುರ: ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕರವಾಗಿರುವ ತಂಬಾಕು ಉತ್ಪನ್ನ ಮಾರಾಟ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾಮಟ್ಟದ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಜಿಲ್ಲಾ ಹಾಗೂ ತಾಲೂಕು ತನಿಖಾ ತಂಡದ ಸದಸ್ಯರುಗಳಿಂದ ನಿರಂತರ ದಾಳಿ ಕೈಗೊಳ್ಳಬೇಕು. ಎಲ್ಲ ತಾಲೂಕುಗಳಲ್ಲಿ ತನಿಖಾ ದಳದ ಸದಸ್ಯರೊಂದಿಗೆ ಆಯಾ ತಾಲೂಕು ತಹಶೀಲ್ದಾರರು ನಾಲ್ಕು ತ್ರೈಮಾಸಿಕ ಸಭೆ ನಡೆಸಿ ಪ್ರತಿ ತಿಂಗಳ 2-3 ದಾಳಿ ನಡೆಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಅನಧಿಕೃತವಾಗಿ ತಂಬಾಕು ಮಾರಾಟ ಕೇಂದ್ರಗಳ ಮೇಲೆ ತನಿಖಾ ತಂಡಗಳಿಂದ ಆಗಾಗ ದಾಳಿ ನಡೆಸಬೇಕು. ಸರ್ಕಾರಿ ಕಚೇರಿಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು ಉದ್ಯಮಿಗಳಿಗೆ ಪರವಾನಗಿ ನೀಡುವಾಗ ಎಲ್ಲ ಪಾನ್ ಶಾಪ್‍ಗಳು ಸೆಕ್ಷನ್-4 ಮತ್ತು ಸೆಕ್ಷನ್ 6(ಎ) ಸಂಬಂಧಿಸಿದ ನಾಮಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಹಾಗೂ ಎಲ್ಲ ಅಂಗಡಿ, ಹೋಟೆಲ್, ರೆಸ್ಟೋರೆಂಟ್, ಬೇಕರಿ ಹಾಗೂ ಲಾಡ್ಜ್ ಗಳಲ್ಲಿ ಸೆಕ್ಷನ್-4 ಗೆ ಸಂಬಂಧಿಸಿದ ನಾಮಫಲಕವನ್ನು ಅಳವಡಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಎಲ್ಲ ಶಿಕ್ಷಣ ಸಂಸ್ಥೆಗಳು ಸೆಕ್ಷನ್-4 ಮತ್ತು ಸೆಕ್ಷನ್-6(ಬಿ) ಗೆ ಸಂಬಂಧಿಸಿದ ನಾಮಫಲಕಗಳನ್ನು ಅಳವಡಿಸಿ ತಂಬಾಕು ಮುಕ್ತ ವಲಯವನ್ನಾಗಿ ಮಾಡಬೇಕು ಎಂದರು. ಸಿಂದಗಿ ತಾಲೂಕನ್ನು ಕೋಟ್ಪಾ - 2003 ರ ಕಾಯ್ದೆಯ ಉನ್ನತ ಅನುಷ್ಠಾನ ತಾಲೂಕನ್ನಾಗಿ ಘೋಷಿಸಲು ಆಯ್ಕೆ ಮಾಡಿರುವುದರಿಂದ, ಸಿಂದಗಿ ತಾಲೂಕಿನಲ್ಲಿ ಕೊಟ್ಪಾ ನಿಯಮಗಳು ಪರಿಣಾಮಕಾರಿಯಾಗಿ ಅನುಷ್ಠಾನ ಕೈಗೊಳ್ಳಬೇಕು ಎಂದರು. ಸಭೆಯ ನಂತರ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ಆಟೋಗೆ ಹಸಿರು ನಿಶಾನೆ ನೀಡುವ ಮೂಲಕ ಚಾಲನೆ ನೀಡಿದರು.
ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ಆಟೋಗೆ ಹಸಿರು ನಿಶಾನೆ ನೀಡುವ ಮೂಲಕ ಚಾಲನೆ ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಮಹೇಂದ್ರ ಕಾಪ್ಸೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.