ವಿಜಯಪುರ:ಕೆಲವು ಸಕ್ಕರೆ ಕಾರ್ಖಾನೆಯವರು ರೈತರು ಕಾರ್ಖಾನೆಗೆ ತರುವ ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿರುವ ಆರೋಪ ಕೇಳಿಬರುತ್ತಿದೆ. ರೈತರು ಈ ಬಗ್ಗೆ ಸಾಕ್ಷಿ ಸಮೇತ ದೂರು ಸಲ್ಲಿಸಿದರೆ ಅಂಥ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಮುಂದಿನ ವರ್ಷದಿಂದ ಈ ಅಕ್ರಮ ತಡೆಯಲು ಸರ್ಕಾರದ ವತಿಯಿಂದಲೇ ಎಲೆಕ್ಟ್ರಾನಿಕ್ ವೇಯಿಂಗ್ ಮಷಿನ್ ಅಳವಡಿಸಲಾಗುತ್ತದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕುಂಟೋಜಿಯಲ್ಲಿ ಭಾನುವಾರ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಡಾ. ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಕ್ಕರೆ ಕಾರ್ಖಾನೆಯಲ್ಲಿ ಉತ್ಪತ್ತಿಯಾಗುವ ಇಥೆನಾಲ್ ಸೇರಿ ಎಲ್ಲ ಉಪ ಉತ್ಪನ್ನಗಳ ಲಾಭಾಂಶ ರೈತರಿಗೆ ಹಂಚಿಕೆ ಮಾಡಬೇಕು.
ಸರ್ಕಾರ ನಿಗದಿಪಡಿಸಿದ ಎಮ್ ಆರ್ ಪಿ ದರದಂತೆ ಕಬ್ಬು ಖರೀದಿಸಬೇಕು. ರೈತರಿಗೆ ಉಪಯುಕ್ತವಾಗಿ ಕೆಲಸ ಮಾಡಬೇಕು. ಈ ಬಗ್ಗೆ ಸರ್ಕಾರ ಹೊರಡಿಸಿರುವ ಆದೇಶ ಕಡ್ಡಾಯವಾಗಿ ಪಾಲಿಸಬೇಕು ಎಂದರು. ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ, ಬಸವ ನಾಡು ಎನ್ನುವ ಹೆಸರು ಇಡಲು ಚರ್ಚೆ ನಡೆದಿರುವುದು ರಾಜಕೀಯ ಲಾಭದ ಹೊರತಾಗಿರಬೇಕು ಎಂದು ಪುನರುಚ್ಚರಿಸಿದರು. ನಾನೂ ಬಸವಾಭಿಮಾನಿ, ಬಸವ ನಾಡಿನ ಬಸವಭಕ್ತ. ರಾಜಕೀಯ ಕಾರಣಕ್ಕಾಗಿ ಹೆಸರು ಬದಲಾವಣೆ ವಿಷಯ ಮುನ್ನಲೆಗೆ ತರುವುದು ಶೋಭೆ ತರುವಂಥದ್ದಲ್ಲ ಎಂದರು.