ವಿಜಯಪುರ:ರಾಜ್ಯದಲ್ಲಿರುವ ತಳವಾರ, ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ನೀಡಬೇಕೆಂದು ಒತ್ತಾಯಿಸಿ ಆ.15 ರಿಂದ ವಿವಿಧ ರೂಪದಲ್ಲಿ ಚಳವಳಿ ನಡೆಸಿ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಲಾಗಿದೆ ಎಂದು ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 12 ತಾಲೂಕಿನಲ್ಲಿ 15ರಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ನಂತರ ಪತ್ರ ಬರೆಯುವ ಚಳವಳಿ ಹಾಗೂ ಕಾನೂನು ಹೋರಾಟದ ರೀತಿಯ ಮೂರು ಪ್ರಕಾರದ ಹೋರಾಟ ನಡೆಸಲಾಗುವುದು. ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಕೇಂದ್ರ ಸರ್ಕಾರ ತಳವಾರ, ಪರಿವಾರ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅದರಂತೆ ಕೆಲವು ದಿನ ರಾಜ್ಯ ಸರ್ಕಾರ ಸಹ ತಳವಾರ, ಪರಿವಾರ ಜಾತಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದೆ. ಆದರೆ ವಾಲ್ಮೀಕಿ ಸಮಾಜದವರು ತಮ್ಮ ಜಾತಿಗೆ ಇರುವ ಸೌಲಭ್ಯ ತಳವಾರ, ಪರಿವಾರ ಸಮಾಜಕ್ಕೆ ನೀಡುತ್ತಿರುವುದಕ್ಕೆ ಆಕ್ಷೇಪಣೆ ಸಲ್ಲಿಸಿದ್ದು, ಸರ್ಕಾರ ಇದನ್ನು ಮುಂದಿಟ್ಟುಕೊಂಡು ತಮ್ಮ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಕೂಡಲೇ ಸರ್ಕಾರ ನಮ್ಮ ಜಾತಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸಬೇಕು. ಇಲ್ಲವಾದರೆ ವಿವಿಧ ಮಾದರಿಯ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.