ಮುದ್ದೇಬಿಹಾಳ: ತಾಳಿಕೋಟೆ ತಾಲೂಕಿನ ಪೀರಾಪೂರ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯು ಮುಕ್ತಾಯಗೊಂಡು ವರ್ಷ ಕಳೆದಿದೆ. ಆದರೆ ಈಗಾಗಲೇ ಈ ಯೋಜನೆಯಿಂದ 14 ಗ್ರಾಮಗಳಿಗೆ ಪೂರೈಕೆ ಮಾಡಲಾಗುತ್ತಿರುವ ಕುಡಿಯುವ ನೀರು ಕೊಳಚೆ ಮಟ್ಟದಿಂದ ಪೂರೈಕೆಯಾಗುತ್ತಿದ್ದು, ಕೂಡಲೇ ಶುದ್ದ ಕುಡಿಯುವ ನೀರು ಒದಗಿಸಲು ಕ್ರಮ ವಹಿಸಬೇಕೆಂದು ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ತಹಶಿಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ತಾಳಿಕೋಟಿ ಪಟ್ಟಣದ ತಹಶಿಲ್ದಾರ್ ಕಚೇರಿಗೆ ಆಗಮಿಸಿದ್ದ ಗ್ರಾಮಸ್ಥರು ಹಾಗೂ ಸಂಘಟನೆಯ ಪದಾಧಿಕಾರಿಗಳು, ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಿದ್ದರೂ ಕುಡಿಯುವ ನೀರಿಗೆ ಸಂಬಂಧಿಸಿ ಪೀರಾಪೂರ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಜೋಡಿಸಲಾಗಿರುವ ಎಲ್ಲ ಸಾಮಗ್ರಿಗಳು ಕಳಪೆ ಮಟ್ಟದಿಂದ ಜೋಡಣೆ ಮಾಡಲಾಗಿದೆ. ಇದರಿಂದ ನೀರು ಶುದ್ದೀಕರಣವಾಗದೇ ಎಲ್ಲ ಗ್ರಾಮಸ್ಥರಿಗೆ ಪೂರೈಕೆಯಾಗುತ್ತಿದೆ. ಪ್ರತಿ ಗ್ರಾಮಗಳಲ್ಲಿ ಕೈಗೊಳ್ಳಲಾಗಿರುವ ಪೈಪ್ ಲೈನ್ ಕಾಮಗಾರಿಯು ಸಹ ಕಳಪೆ ಮಟ್ಟದಿಂದ ಕೈಗೊಂಡಿದ್ದರಿಂದ ಅಲ್ಲಲ್ಲಿ ಒಡೆದು ಹೋಗಿವೆ. ಕೆಲವು ಚರಂಡಿಯ ನೀರು ಈ ಪೈಪ್ಗಳಲ್ಲಿ ಶೇಖರಣೆಯಾಗುತ್ತಿದೆ ಎಂದು ತಿಳಿಸಿದ್ದಾರೆ.