ಮುದ್ದೇಬಿಹಾಳ: ಲಾಕ್‌ಡೌನ್ ಸಮಯದಲ್ಲಿ ಹಸಿದವರಿಗೆ ಮನೆ ಮನೆಗೆ ತೆರಳಿ ಅನ್ನದಾಸೋಹ ಕಾರ್ಯ ಕೈಗೊಂಡ ತಾಳಿಕೋಟಿಯ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು, ಹಸಿರು ಜೋಳಿಗೆಯ ಮೂಲಕ ತಾವೇ ಮನೆ ಮನೆಗಳಿಗೆ ತೆರಳಿ ಸಸಿ ಕೊಟ್ಟು ವಿನೂತನ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.
ಭಕ್ತರ ಪಾಲಿನ ಸಂಜೀವಿನಿ ಎಂದು ಹೆಸರಾಗಿರುವ ಸಿದ್ದಲಿಂಗ ದೇವರು ಕೊರೊನಾ ವೇಳೆ ಸಂಕಷ್ಟದಲ್ಲಿದ್ದ ಸುಮಾರು 22 ಸಾವಿರ ಕುಟುಂಬಗಳಿಗೆ ಮಠದಿಂದ ಪ್ರಸಾದದ ರೂಪದಲ್ಲಿ ದಿನಸಿ ಕಿಟ್‌ಗಳನ್ನು ನೀಡಿದ್ದರು. ಈ ಮೂಲಕ ಸಂಕಷ್ಟದಲ್ಲಿದ್ದ ಭಕ್ತರ ಹಸಿವು ನೀಗಿಸುವಂತಹ ಕಾರ್ಯ ಮಾಡಿದ್ದರು.
ಐತಿಹಾಸಿಕ ಕೋಟೆ ನಗರಿ ತಾಳಿಕೋಟೆಯಲ್ಲಿ ಗಿಡಮರಗಳು ಹೆಚ್ಚಿಗೆ ಕಾಣಬೇಕು, ಪಟ್ಟಣ ಸಂಪೂರ್ಣ ಹಸಿರೀಕರಣಗೊಳ್ಳಬೇಕೆಂಬ ಆಲೋಚನೆಯೊಂದಿಗೆ ಸಿದ್ದಲಿಂಗ ಶ್ರೀಗಳು ಸದ್ಯ ಎರಡು ಸಾವಿರ ಸಸಿಗಳನ್ನು ಶ್ರೀಮಠದಿಂದ ಭಕ್ತರ ಮನೆ ಮನೆಗೆ ನೀಡುವಂತಹ ಕಾರ್ಯಕ್ಕೆ ಮುಂದಾಗಿದ್ದಾರೆ. ಮಠದಿಂದ ಶ್ರೀಗಳು ಕೈಗೊಂಡಿರುವ ಈ ವೃಕ್ಷ ಅಭಿಯಾನಕ್ಕೆ ನೂರಾರು ಯುವಕರು ಕೂಡಾ ಕೈಜೋಡಿಸಿದ್ದಾರೆ.