ವಿಜಯಪುರ: ಜಿಲ್ಲೆಯ ಇಂಡಿ ವಿಧಾನಸಭೆ ಕ್ಷೇತ್ರದ 12 ಗ್ರಾಮಗಳಲ್ಲಿ ಭೀಮಾ ನದಿಯ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಸರ್ಕಾರ ಬರಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ್, ಸಿಎಂ ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್ಗೆ ಪತ್ರ ಬರೆದಿದ್ದಾರೆ.
ನೆರೆಯಿಂದ ರೈತರ ಬದುಕು ಅತಂತ್ರ: ನೆರವಿಗೆ ಬರುವಂತೆ ಸರ್ಕಾರಕ್ಕೆ ಇಂಡಿ ಶಾಸಕರ ಪತ್ರ
ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿ ತೀರದಲ್ಲಿ ಸುರಿಯುತ್ತಿರುವ ಮಳೆ ಹಾಗೂ ಮಹಾರಾಷ್ಟ್ರದ ಉಜ್ಜನಿ ಹಾಗೂ ವೀರಾ ಜಲಾಶಯದಿಂದ 5 ಲಕ್ಷ ಕ್ಯೂಸೆಕ್ಗೂ ಅಧಿಕ ನೀರು ಬಿಡುಗಡೆಯಾಗುತ್ತಿರುವ ಕಾರಣ ಭೀಮಾ ನದಿಯಲ್ಲಿ ಪ್ರವಾಹ ಎದುರಾಗಿದೆ.
8 ಬ್ಯಾರೇಜ್ಗಳು ಜಲಾವೃತವಾಗಿದ್ದು, ಭೀಮಾ ನದಿ ತೀರದ ಹಿಂಗಣಿ, ಬರಗುಡಿ, ಪಡನೂರ, ಶಿರಗೂರ ಇನಾಂ, ಗುಬ್ಬೇವಾಡ, ಅಗರಖೇಡ, ಚಿಕ್ಕ ಮಣ್ಣೂರ, ಭುಯ್ಯಾರ, ನಾಗರಹಳ್ಳಿ, ಖೇಡಗಿ, ರೋಡಗಿ, ಮಿರಗಿ ಸೇರಿದಂತೆ ಒಟ್ಟು 12 ಗ್ರಾಮಗಳಲ್ಲಿ ಕಬ್ಬು, ತೊಗರಿ, ಹತ್ತಿ, ದಾಳಿಂಬೆ, ದ್ರಾಕ್ಷಿ, ಶೇಂಗಾ, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳಿರುವ ಜಮೀನುಗಳಲ್ಲಿ ನೀರು ನಿಂತಿದೆ.
ಜತೆಗೆ ಸಾವಿರಾರು ಮನೆಗಳು ಭಾಗಶಃ ಕುಸಿದಿವೆ. ಸರ್ಕಾರಿ ಕಟ್ಟಡ, ರಸ್ತೆ, ಶಾಲಾ ಕಟ್ಟಡಗಳಿಗೂ ಹಾನಿಯಾಗಿದೆ. ತಕ್ಷಣ ಬಾಧಿತ ಗ್ರಾಮಗಳಲ್ಲಿ ಪರಿಹಾರ ಕೇಂದ್ರ ಹಾಗೂ ಪ್ರಾಥಮಿಕ ವರದಿ ಪಡೆದು ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ಪರಿಹಾರ, ಕುಸಿದ ಮನೆಗಳ ಮರು ನಿರ್ಮಾಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.