ವಿಜಯಪುರ:ಪ್ರವಾಸಿಗರಿಂದ ಹೆಚ್ಚಿನ ಹಣ ಕೀಳುವ ಹಾಗೂ ಪ್ರವಾಸಿಗರನ್ನು ಅಗೌರವದಿಂದ ಕಾಣುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಪ್ರವಾಸೋದ್ಯಮದ ಹಿನ್ನೆಡೆಗೆ ಬಹುದೊಡ್ಡ ಕಾರಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರಿಂದ ಹಣ ಕೀಳುವ ಪ್ರವೃತ್ತಿ ನಡೆಯುತ್ತಿರುವುದು ನಿಜಕ್ಕೂ ನೋವಿನ ಸಂಗತಿ. ಈ ಎಲ್ಲ ಕಾರಣಗಳಿಂದಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿ ಪ್ರವಾಸೋದ್ಯಮ ತಗ್ಗುತ್ತಿದೆ ಎಂದು ವಿಷಾದಿಸಿದರು.
ಪ್ರವಾಸಿಗರನ್ನು ನಾವು ಅತಿಥಿಗಳಂತೆ ಗೌರವಿಸಬೇಕಾಗಿದೆ. ಆಗ ಮಾತ್ರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಸಾಧ್ಯವಾಗುತ್ತದೆ. ಪ್ರವಾಸೋದ್ಯಮ ಒಂದು ಬಹುಮುಖ್ಯವಾದ ಉದ್ಯೋಗ ಸೃಷ್ಟಿಯ ಕ್ಷೇತ್ರ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಆದೀಶ್ ನಾಗನೂರೆ, ಭಯೋತ್ಪಾದನೆ ಚಟುವಟಿಕೆಗಳಿಂದಾಗಿ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತವಾಗಿದೆ. ಉಗ್ರಗಾಮಿ ಚಟುವಟಿಕೆಗಳು ನಡೆಯುವ ಭಯದಿಂದಾಗಿ ಅನೇಕ ವಿದೇಶಿಗರು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಗೋಜಿಗೆ ಹೋಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ನಾವು ಕಡಿವಾಣ ಹಾಕಬೇಕು. ಭಯೋತ್ಪಾದನೆ ಚಟುವಟಿಕೆಗಳನ್ನು ಸಂಪೂರ್ಣ ಮಟ್ಟ ಹಾಕಿದಾಗ ಪ್ರವಾಸೋದ್ಯಮ ಪ್ರಗತಿಯಾಗಲು ಸಾಧ್ಯ ಎಂದರು.
ಎಎಸ್‌ಐ ಕಾರ್ಯವೈಖರಿಗೆ ಯತ್ನಾಳ ಗರಂ:
ಪ್ರವಾಸೋದ್ಯಮ ಹಾಗೂ ಸ್ಮಾರಕಗಳ ಅಭಿವೃದ್ಧಿಗೆ ಪುರಾತತ್ವ ಇಲಾಖೆಯೇ ಒಂದು ರೀತಿ ಶಾಪವಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪುರಾತತ್ವ ಇಲಾಖೆಯ ಕಾರ್ಯವೈಖರಿ ಬಗ್ಗೆ ಗರಂ ಆದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಮಾರಕಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕಾದ ಪುರಾತತ್ವ ಇಲಾಖೆ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿದೆ. ಗಗನ್ ಮಹಲ್ ಉದ್ಯಾನದಲ್ಲಿ ಬೋಟಿಂಗ್ ಮಾಡಲು ನಿರ್ಣಯಿಸಲಾಗಿತ್ತು. ಆದರೆ ಎಎಸ್‌ಐ ಅಧಿಕಾರಿಗಳು ಅದಕ್ಕೆ ಅನುಮತಿ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರವಾಸಿ ಧ್ವನಿ ಮಾರ್ಗದರ್ಶಿ ಆ್ಯಪ್‌ನ್ನು ಬಿಡುಗಡೆಗೊಳಿಸಲಾಯಿತು. ಪ್ರವಾಸೋದ್ಯಮ ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು.
ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಎಸ್.ಪಿ. ಪ್ರಕಾಶ ನಿಕಮ್, ಜಿ.ಪಂ. ಸಿಇಒ ವಿಕಾಸ ಸುರಳಕರ ಮೊದಲಾದವರು ಪಾಲ್ಗೊಂಡಿದ್ದರು.