ವಿಜಯಪುರ:ಆಲಮಟ್ಟಿ ಜಲಾಶಯದ ಒಳ ಮತ್ತು ಹೊರ ಹರಿವು ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ನಾರಾಯಣಪುರ ಜಲಾಶಯದ ಹಿನ್ನೀರು ಗ್ರಾಮಗಳ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದ್ದು, ಇನ್ನೂ ಎರಡು ದಿನ ಜಲಾಶಯದಿಂದ 2.50 ಲಕ್ಷ ಕ್ಯೂಸೆಕ್ ನೀರು ಹೊರಹರಿಯಲಿದೆ. ಹೀಗಾಗಿ ಮತ್ತಷ್ಟು ಭೂಮಿ ಜಲಾವೃತವಾಗಲಿದ್ದು, ಬಾಧಿತ ಗ್ರಾಮಗಳಲ್ಲಿ ಡಂಗೂರು ಸಾರಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮಹಾರಾಷ್ಟ್ರದ ಮಹಾಬಳೇಶ್ವರ, ಸತಾರ, ಕೊಯ್ನಾ ಪ್ರದೇಶದಲ್ಲಿ ಹಾಗೂ ಕರ್ನಾಟಕದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿದೆ. ಇದರ ಪರಿಣಾಮ ಮಹಾರಾಷ್ಟ್ರದ ಜಲಾಶಯಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ಕಾರಣಕ್ಕೆ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಸಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಜಲಾಶಯಕ್ಕೆ 1.50 ಲಕ್ಷ ಕ್ಯೂಸೆಕ್ ನೀರು ಒಳಹರಿವು ಇದೆ. ಇದರ ಪರಿಣಾಮ ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಜಲಾಶಯಕ್ಕೆ ಯಾವುದೇ ಅಪಾಯ ಎದುರಾಗದಂತೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರ ನೇಮಿಸಿರುವ ಅಧಿಕಾರಿಗಳ ಸಮನ್ವಯದಿಂದ ನೀರಿಗೆ ಅನುಗುಣವಾಗಿ ಜಲಾಶಯದಿಂದ ಹೊರ ಹರಿವು ಹೆಚ್ಚಳ ಮಾಡಲಾಗಿದೆ. ಸದ್ಯ ಕಳೆದ ಮೂರು ದಿನಗಳಿಂದ ಜಲಾಶಯದ 26 ಕ್ರೆಸ್ಟ್ ಗೇಟ್ ಗಳ ಮೂಲಕ ಹೊರ ಹರಿವು ಪ್ರಮಾಣ 2.50 ಲಕ್ಷ ಕ್ಯೂಸೆಕ್ ಕಾಪಾಡಿಕೊಂಡು ಬರಲಾಗುತ್ತಿದೆ.