ಮುದ್ದೇಬಿಹಾಳ : ತಾಲೂಕಿನ ಗರಸಂಗಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮುದ್ದೇಬಿಹಾಳದಲ್ಲಿ ಅಕ್ರಮ ಮದ್ಯ ಮಾರಾಟ ಆರೋಪ ಮದ್ಯ ಮಾರಾಟಗಾರರು ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಮೂಲು ಸಂದಾಯ ಮಾಡುತ್ತೇವೆ, ನಮಗ್ಯಾರೂ ಏನೂ ಮಾಡುವುದಿಲ್ಲ ಎಂದು ಹೇಳುತ್ತ ರಾಜಾರೋಷವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದಾರೆ ಎಂದು ಗರಸಂಗಿ ಗ್ರಾಮಸ್ಥರು ಆರೋಪಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ಮಾದಿಗ ದಂಡೋರ ಯುವ ಸೇನೆಯ ಪದಾಧಿಕಾರಿಗಳು ಹಾಗೂ ಗರಸಂಗಿ ಗ್ರಾಮದ ಮಹಿಳೆಯರು ತಹಶೀಲ್ದಾರ್‌ಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಮುದ್ದೇಬಿಹಾಳದಲ್ಲಿ ಅಕ್ರಮ ಮದ್ಯ ಮಾರಾಟ ಆರೋಪ ಗರಸಂಗಿ ಗ್ರಾಮದಲ್ಲಿ ಮಾಯಪ್ಪ ಮಾದರ್ ಎಂಬಾತ ತನ್ನ ಮನೆಯಲ್ಲಿ ಅಕ್ರಮವ ಮದ್ಯ ಮಾರಾಟದಲ್ಲಿ ತೊಡಗಿದ್ದಾನೆ. ಇದರಿಂದ ಮಹಿಳೆಯರಿಗೆ ನೆಮ್ಮದಿ ಇಲ್ಲದಂತಾಗಿದೆ. ಅಪ್ರಾಪ್ತ, ವಯಸ್ಕ ಯುವಕರು ಮನಬಂದಂತೆ ಕುಡಿದು ಗ್ರಾಮದಲ್ಲಿ ತೂರಾಡುತ್ತಾ ಅಶಾಂತಿಯ ವಾತಾವರಣ ನಿರ್ಮಿಸಿದ್ದಾರೆ. ಮದ್ಯ ಮಾರಾಟ ಮಾಡದಂತೆ ಆದೇಶಿಸಲು ಈಗಾಗಲೇ ಮನವಿ ಪತ್ರ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮಾದಿಗ ದಂಡೋರ ಯುವಸೇನೆಯ ಉಪಾಧ್ಯಕ್ಷ ಡಿ.ಎಂ. ದೊಡಮನಿ ಮಾತನಾಡಿ, ಅಧಿಕಾರಿಗಳಿಗೆ ಮದ್ಯ ಮಾರಾಟ ತಡೆಯುವಂತೆ ಕೇಳಿದರೆ ಅದಕ್ಕೆ ಸ್ಪಂದಿಸುತ್ತಿಲ್ಲ. ಮುಖ್ಯವಾಗಿ ಅಬಕಾರಿ ಅಧಿಕಾರಿಗಳೇ ಅಕ್ರಮ ಮದ್ಯ ಮಾರಾಟಕ್ಕೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಮದ್ಯ ಮಾರಾಟ ಮಾಡುವವರು ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಮೂಲು ಕೊಡುತ್ತಿದ್ದಾರೆ ಎಂದು ದೂರಿದರು. ಅಧಿಕಾರಿಗಳು ಕೂಡಲೇ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಮುಂದಾಗಬೇಕು ಎಂದು ಒತ್ತಾಯಿಸಿದರು.